ಖಾಕಿ ಮಾನವೀಯತೆ: ಚೌಡಾಪೂರ–ದೇವಲಗಾಣಗಾಪೂರ ರಸ್ತೆ ಗುಂಡಿ ಮುಚ್ಚಿದ ಪೊಲೀಸ್ ಸಿಬ್ಬಂದಿ

ಕಲಬುರಗಿ: ಸಾರ್ವಜನಿಕ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ದೇವಲಗಾಣಗಾಪೂರ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ ಶ್ರಮದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಚೌಡಾಪೂರ–ದೇವಲಗಾಣಗಾಪೂರ ರಸ್ತೆ ಮಾರ್ಗದಲ್ಲಿ ಬಿದ್ದಿದ್ದ ಭಾರಿ ಗುಂಡಿಗಳಿಗೆ ಸ್ವತಃ ಡಾಂಬರೀಕರಣ ಮಾಡಿ ದುರಸ್ತಿಗೊಳಿಸಿದ್ದಾರೆ.
ಈ ರಸ್ತೆಯಲ್ಲಿ ಉಂಟಾಗಿದ್ದ ಬೃಹತ್ ಗುಂಡಿಗಳಿಂದಾಗಿ ಸವಾರರು ನಿತ್ಯ ಅಪಘಾತದ ಭೀತಿಯಲ್ಲಿ ಸಂಚರಿಸುವಂತಾಗಿತ್ತು. ಸಾರ್ವಜನಿಕರ ಈ ಸಮಸ್ಯೆಯನ್ನು ಗಮನಿಸಿದ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ, ತಾವೇ ಖುದ್ದಾಗಿ ರಸ್ತೆಗೆ ಇಳಿದು ಡಾಂಬರು ಹಾಕಿ ಗುಂಡಿಗಳನ್ನು ಮುಚ್ಚುವ ಮೂಲಕ ವಾಹನಗಳ ಸಂಚಾರ ಸುಗಮಗೊಳಿಸಿದ್ದಾರೆ.
ಎಸ್ಪಿ ಅಡ್ಡೂರು ಶ್ರೀನಿವಾಸುಲು ಶ್ಲಾಘನೆ:
ಪೊಲೀಸ್ ಸಿಬ್ಬಂದಿಯ ಈ ಜನಪರ ಹಾಗೂ ಸಾಮಾಜಿಕ ಕಾಳಜಿಯ ಕೆಲಸಕ್ಕೆ ಕಲಬುರಗಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ (IPS) ಅಡ್ಡೂರು ಶ್ರೀನಿವಾಸುಲು ಅವರು ತೀವ್ರ ಮೆಚ್ಚುಗೆ ವ್ಯಕ್ತಪಡಿಸಿ, ಶ್ಲಾಘಿಸಿದ್ದಾರೆ.
ಸಾರ್ವಜನಿಕ ಸುರಕ್ಷತೆಯತ್ತ ಪೊಲೀಸ್ ಇಲಾಖೆ ಹೊಂದಿರುವ ಬದ್ಧತೆಗೆ ಈ ಘಟನೆ ಸಾಕ್ಷಿಯಾಗಿದ್ದು, ಸ್ಥಳೀಯ ಜನರಿಂದಲೂ ಪೊಲೀಸರ ಕರ್ತವ್ಯ ಪ್ರಜ್ಞೆಗೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ.



