ಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಜಿಪಂ ಸಿಎಒ ಆನಂದಸಾ ಹಬೀಬ್ ಮಾರ್ಗದರ್ಶನ: ‘ಸೋಲನ್ನು ಸವಾಲಾಗಿ ಸ್ವೀಕರಿಸಿ’

Share News

ಕಾರವಾರ: ವಿದ್ಯಾರ್ಥಿಗಳು ಯಾವುದೋ ಒಂದು ಹಂತದಲ್ಲಿ ಸೋತಿದ್ದೇವೆ ಎಂದು ಧೃತಿಗೆಡಬಾರದು. ಸೋಲನ್ನು ಸವಾಲಾಗಿ ಸ್ವೀಕರಿಸಿ, ತಪ್ಪುಗಳನ್ನು ತಿದ್ದಿಕೊಂಡು ನಿರಂತರ ಪರಿಶ್ರಮ ವಹಿಸಿದರೆ ಸೋಲೇ ಗೆಲುವಿನ ಮೆಟ್ಟಿಲಾಗುತ್ತದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ (ಸಿಎಒ) ಆನಂದಸಾ ಹಬೀಬ್ ಕರೆ ನೀಡಿದ್ದಾರೆ.

​ಮುಂಡಗೋಡ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೊಂದಿಗೆ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಪ್ರೇರಣಾದಾಯಕವಾಗಿ ಮಾತನಾಡಿದರು.

​ಸ್ವ-ಅನುಭವ ಹಂಚಿಕೊಂಡ ಸಿಎಒ:

ತಮ್ಮ ಜೀವನದ ಹಾದಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡ ಆನಂದಸಾ ಹಬೀಬ್, “ನಾನು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೂರು ಬಾರಿ ಅನುತ್ತೀರ್ಣಗೊಂಡರೂ ಪ್ರಯತ್ನ ಕೈಬಿಡಲಿಲ್ಲ. ಅಂದಿನ ಅಚಲ ನಿರ್ಧಾರ ಮತ್ತು ಪರಿಶ್ರಮದಿಂದಾಗಿ ನಂತರ ಎದುರಿಸಿದ ಯಾವುದೇ ಪರೀಕ್ಷೆಯಲ್ಲೂ ಸೋಲು ಕಾಣಲಿಲ್ಲ. ನನ್ನಂತಹ ಸಾಮಾನ್ಯ ವ್ಯಕ್ತಿಗೆ ಈ ಮಟ್ಟದ ಯಶಸ್ಸು ಸಾಧಿಸಲು ಸಾಧ್ಯವಿರುವಾಗ ನಿಮ್ಮಿಂದ ಇನ್ನೂ ದೊಡ್ಡ ಸಾಧನೆ ಸಾಧ್ಯವಿದೆ. ನ್ಯೂನತೆಗಳನ್ನು ತಿದ್ದಿಕೊಂಡು ಗುರಿಯಿಟ್ಟು ಮುನ್ನಡೆಯಿರಿ” ಎಂದು ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ತುಂಬಿದರು.

​ವಿವಿಧ ವಸತಿ ಶಾಲೆ, ಅಂಗನವಾಡಿಗೆ ಭೇಟಿ ಪರಿಶೀಲನೆ:

ಸಂವಾದಕ್ಕೂ ಮುನ್ನ ಮುಂಡಗೋಡದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ಜ್ಞಾನ ಪ್ರಜ್ಞಾ ಅಂಧ ಮಕ್ಕಳ ವಸತಿಯುತ ಶಾಲೆ ಹಾಗೂ ದೇಶಪಾಂಡೆ ನಗರದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಮಕ್ಕಳೊಂದಿಗೆ ಸಂವಾದ ನಡೆಸಿದರು. ಅಂಧ ಮಕ್ಕಳ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಅಡುಗೆ ಕೋಣೆ, ದಾಸ್ತಾನು ಕೊಠಡಿ, ಗ್ರಂಥಾಲಯ, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳು ಮತ್ತು ಪ್ರಮುಖ ಕಡತಗಳನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಿದರು.

​ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಯೋಜನಾ ಅಧಿಕಾರಿ ಚೋಳಪ್ಪ ಬಣಕಾರ, ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ, ಸಿಡಿಪಿಒ ಸಂಜೀವ್ ಕುಮಾರ್, ವಾರ್ಡನ್ ಕರಿಯಪ್ಪ ಸೇರಿದಂತೆ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!