ಹನೂರು: ಕಾರ್ ಹಾಗೂ ಪಿಕಪ್ ನಡುವೆ ಭೀಕರ ಅಪಘಾತ — ಪ್ರಾಣಾಪಾಯದಿಂದ ಪಾರಾದ ಮಲೆ ಮಹದೇಶ್ವರ ಸ್ವಾಮಿ ಭಕ್ತರು

ಹನೂರು: ತಾಲೂಕಿನ ಎಲ್ಲೇಮಾಳ ಗ್ರಾಮದ ಬಳಿ ಇಂದು ಬೆಳಿಗ್ಗೆ ಸುಮಾರು 10:30 ರ ಸಮಯದಲ್ಲಿ ಕಾರು ಮತ್ತು ಮಹೇಂದ್ರ ಪಿಕಪ್ ವಾಹನದ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ವಿವರ:
ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಶ್ರೀ ಮಲೈ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಭಕ್ತರು, ಪೂಜೆ ಮುಗಿಸಿಕೊಂಡು ಕಾರಿನಲ್ಲಿ ಬೆಂಗಳೂರಿಗೆ ವಾಪಸ್ ಹಿಂತಿರುಗುತ್ತಿದ್ದರು. ಈ ವೇಳೆ ಎಲ್ಲೇಮಾಳ ಗ್ರಾಮದ ಬಳಿ ರಸ್ತೆ ಹಂಪ್ (Road Hump) ಇದ್ದ ಕಾರಣ, ಮಾರ್ಟಳ್ಳಿ ಗ್ರಾಮಕ್ಕೆ ಸೇರಿದ ಮಹೇಂದ್ರ ಪಿಕಪ್ ವಾಹನದ ಚಾಲಕ ತನ್ನ ವಾಹನದ ವೇಗವನ್ನು ಕಡಿಮೆ ಮಾಡಿದ್ದಾನೆ.
ಅದೇ ಸಮಯದಲ್ಲಿ ಹಿಂಬದಿಯಿಂದ ವೇಗವಾಗಿ ಬಂದ ಭಕ್ತರ ಕಾರು ಪಿಕಪ್ ವಾಹನಕ್ಕೆ ಸಾರಾಸಗಟಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಪ್ರಯಾಣಿಕರು ಪಾರು:
ಅಪಘಾತ ಸಂಭವಿಸಿದ ವೇಳೆ ಕಾರಿನಲ್ಲಿ ನಾಲ್ವರು ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಹನೂರು ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
– ಶಾರುಕ್ ಖಾನ್, ಪತ್ರಕರ್ತರು, ಹನೂರು



