ಮೈಸೂರು: ವಿವಾದಿತ ಮಾತೃಮಂಡಳಿ ವೃತ್ತದಲ್ಲಿ ಪೊಲೀಸ್ ಜೀಪ್ ಪ್ರತ್ಯಕ್ಷ; ಹಬ್ಬದ ನಡುವೆ ಮುನ್ನೆಚ್ಚರಿಕಾ ಭದ್ರತೆ ಹೆಚ್ಚಳ

ಮೈಸೂರು, ಸೆ.13: ನಗರದ ಅತ್ಯಂತ ವಿವಾದಿತ ಹಾಗೂ ಸೂಕ್ಷ್ಮ ಪ್ರದೇಶವೆನಿಸಿಕೊಂಡಿರುವ ಮಾತೃಮಂಡಳಿ ವೃತ್ತದಲ್ಲಿ ಇದೀಗ ಪೊಲೀಸ್ ಜೀಪ್ವೊಂದು ರಾರಾಜಿಸುತ್ತಿದ್ದು, ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರತಿಮೆ ಸ್ಥಾಪನೆಗೆ ಅವಕಾಶ ನೀಡದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.
ವಿವಾದದ ಹಿನ್ನೆಲೆ:
ಈ ಹಿಂದೆ ಈ ವೃತ್ತದಲ್ಲಿ ಒಂದು ಗುಂಪು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಗೆ ಪಟ್ಟು ಹಿಡಿದಿದ್ದರೆ, ಮತ್ತೊಂದು ಗುಂಪು ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆ ಅನಾವರಣಕ್ಕೆ ಆಗ್ರಹಿಸಿತ್ತು. ಈ ವಿಚಾರ ಎರಡು ಗುಂಪುಗಳ ನಡುವೆ ತೀವ್ರ ವಿವಾದಕ್ಕೆ ತಿರುಗಿ, ಸ್ಥಳದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು.
ಪರಿಸ್ಥಿತಿ ಕೈಮೀರುವುದನ್ನು ಅರಿತ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ, ಯಾವುದೇ ಪ್ರತಿಮೆ ಸ್ಥಾಪನೆಗೆ ಅವಕಾಶ ನೀಡದೆ ವೃತ್ತವನ್ನು ‘ಅತ್ಯಂತ ಸೂಕ್ಷ್ಮ ಪ್ರದೇಶ’ ಎಂದು ಘೋಷಿಸಿತ್ತು. ಘಟನೆ ನಡೆದು ಹಲವು ವರ್ಷಗಳು ಕಳೆದರೂ ಇಲ್ಲಿ 24 ಗಂಟೆಗಳ ಕಾಲ ಪೊಲೀಸ್ ಕಾವಲು ಕಾಯಲಾಗುತ್ತಿದೆ.
ಹಬ್ಬದ ವೇಳೆ ಬಿಗಿ ಭದ್ರತೆ:
ಇದೀಗ ಗೌರಿ-ಗಣೇಶ ಹಬ್ಬದ ಸಂಭ್ರಮದ ನಡುವೆ, ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಹೊಸದಾಗಿ ಪ್ರತಿಮೆ ಸ್ಥಾಪನೆ ಮಾಡುವ ಸಾಹಸಕ್ಕೆ ಯಾರೂ ಕೈಹಾಕದಂತೆ ಮುನ್ನೆಚ್ಚರಿಕೆಯಾಗಿ ಪ್ರತಿಮೆ ಇರಬೇಕಿದ್ದ ಮೂಲ ಜಾಗದಲ್ಲೇ ಪೊಲೀಸ್ ಜೀಪ್ ನಿಲ್ಲಿಸಲಾಗಿದೆ.
ಹಬ್ಬದ ಸಂದರ್ಭದಲ್ಲಿ ನಗರದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಮತ್ತು ಯಾವುದೇ ಹೊಸ ವಿವಾದಕ್ಕೆ ಆಸ್ಪದ ನೀಡದಿರಲು ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.



