ಹೊಸಕೋಟೆಯಲ್ಲಿ ತಾಲೂಕು ಮಟ್ಟದ ಪ್ರಜಾ ಸೇವಾ ಆಂದೋಲನ ಸಭೆ: ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ

ಹೊಸಕೋಟೆ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಪ್ರಜಾ ಸೇವಾ ಆಂದೋಲನ’ದ ಭಾಗವಾಗಿ ಹೊಸಕೋಟೆ ಟೌನ್ನ ಯಾದವ ಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ ಅವರು ಸಾರ್ವಜನಿಕರಿಂದ ನೇರವಾಗಿ ಅಹವಾಲುಗಳನ್ನು ಸ್ವೀಕರಿಸಿದರು.
ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಜಂಟಿಯಾಗಿ ಆಯೋಜಿಸಲಾಗಿದ್ದ ಈ ಸಭೆಯಲ್ಲಿ, ತಾಲೂಕಿನ ನಾನಾ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರ ಕುಂದು-ಕೊರತೆ ಹಾಗೂ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳು ಸುದೀರ್ಘವಾಗಿ ಆಲಿಸಿದರು.
ಸ್ಥಳದಲ್ಲೇ ಪರಿಹಾರಕ್ಕೆ ಸೂಚನೆ:
ಸಾರ್ವಜನಿಕರಿಂದ ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಸ್ಥಳದಲ್ಲೇ ಬಗೆಹರಿಸಬಹುದಾದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪ್ರತಿ ಶನಿವಾರ ಸಭೆ:
‘ಬಾಗಿಲಿಗೆ ಬಂತು ಸರ್ಕಾರ, ಸರ್ಕಾರದ ಸೇವೆಗೆ ಇರಲಿ ನಿಮ್ಮ ಸಹಕಾರ’ ಎಂಬ ಧೈಯವಾಕ್ಯದೊಂದಿಗೆ ಪ್ರಜಾ ಸೇವಾ ಇಲಾಖೆಯ ಮೂಲಕ ಈ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಸರ್ಕಾರವೇ ನೇರವಾಗಿ ಜನರ ಬಳಿಗೆ ತೆರಳಿ ಕುಂದುಕೊರತೆ ಆಲಿಸುವ ನಿಟ್ಟಿನಲ್ಲಿ ಪ್ರತಿ ಶನಿವಾರ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಈ ಸಭೆಗಳನ್ನು ಆಯೋಜಿಸಲಾಗುತ್ತಿದೆ.
ಹಿರಿಯ ಅಧಿಕಾರಿಗಳ ಭಾಗಿ:
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಡಾ. ವಾಸಂತಿ ಅಮರ್, ಉಪವಿಭಾಗಾಧಿಕಾರಿ (AC) ಮಂಜುನಾಥ್, ಜಿಪಂ ಉಪಕಾರ್ಯದರ್ಶಿ ಶಿವಕುಮಾರ್ ಸೇರಿದಂತೆ ವಿವಿಧ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.



