ಜಿಲ್ಲಾ ಸುದ್ದಿಕ್ರೈಂ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಭೀಕರ ಅಪಘಾತ: ಕಾರು – ಬೈಕ್ ಮುಖಾಮುಖಿ ಡಿಕ್ಕಿ; ಮೂವರು ಯುವಕರ ದಾರುಣ ಸಾವು

Share News

ಹನೂರು: ಪಟ್ಟಣದ ಹೊರವಲಯದ ಹುಲಸುಗುಡ್ಡೆ ಬಳಿ ಅಪರಿಚಿತ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ಸಂಭವಿಸಿದೆ.

​ತಾಲ್ಲೂಕಿನ ಕೊಪ್ಪ ಗ್ರಾಮದ ನಿವಾಸಿಗಳಾದ ಮಹೇಂದ್ರ (35), ಸುರೇಶ್ (24) ಹಾಗೂ ಮುನಿಯಪ್ಪ (35) ಮೃತಪಟ್ಟ ದುರ್ದೈವಿಗಳು.

​ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲಿದ್ದಾಗ ಸಂಭವಿಸಿದ ದುರಂತ:

ಮೃತಪಟ್ಟ ಮೂವರು ಯುವಕರು ಗೌರಿ-ಗಣೇಶ ಹಬ್ಬದ ಪ್ರಯುಕ್ತ ಗಣಪತಿ ಮೂರ್ತಿ ತರಲು ಕೊಳ್ಳೇಗಾಲದಲ್ಲಿದ್ದ ತಮ್ಮ ಸ್ನೇಹಿತರ ಬಳಿ ಚಂದಾ (ದಣಿಕೆ) ಹಣ ಸಂಗ್ರಹಿಸಿ, ದ್ವಿಚಕ್ರ ವಾಹನದಲ್ಲಿ ಕೊಳ್ಳೇಗಾಲಕ್ಕೆ ತೆರಳುತ್ತಿದ್ದರು. ಈ ವೇಳೆ ಹನೂರು ಹೊರವಲಯದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಸಮೀಪ, ಮೈಸೂರಿನಿಂದ ಮಲೆಮಹದೇಶ್ವರ ಬೆಟ್ಟದ ಕಡೆಗೆ ಅತಿ ವೇಗವಾಗಿ ಸಾಗುತ್ತಿದ್ದ ಅಪರಿಚಿತ ಕಾರು ಬೈಕ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ.

​ಸ್ಥಳದಲ್ಲೇ ಇಬ್ಬರು ಸಾವು, ಆಸ್ಪತ್ರೆಗೆ ಒಯ್ಯುವಾಗ ಮತ್ತೊಬ್ಬ ಮೃತ್ಯು:

ಅಪಘಾತದ ತೀವ್ರತೆಗೆ ಇಬ್ಬರು ಯುವಕರು ಸ್ಥಳದಲ್ಲೇ ಕೊನೆಯುಸಿರೆಳೆದರೆ, ತೀವ್ರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಹಬ್ಬದ ದಿನವೇ ಗ್ರಾಮದ ಮೂವರು ಯುವಕರು ದುರಂತವಾಗಿ ಮೃತಪಟ್ಟಿರುವುದು ಕೊಪ್ಪ ಗ್ರಾಮದಲ್ಲಿ ಶೋಕಸಾಗರ ತಂದಿಟ್ಟಿದೆ.

​ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಪಘಾತ ಎಸಗಿ ಪರಾರಿಯಾಗಿರುವ ಕಾರು ಮತ್ತು ಚಾಲಕನಿಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.

​- ಶಾರುಕ್ ಖಾನ್, ಹನೂರು


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!