ಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಯಶವಂತಪುರ APMC ಮಾರುಕಟ್ಟೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ – ರೈತರು, ವ್ಯಾಪಾರಿಗಳ ಸಮಸ್ಯೆ ಆಲಿಕೆ

Share News

ಬೆಂಗಳೂರು: ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಪ್ರಾಂಗಣಕ್ಕೆ ಬೆಳ್ಳಂಬೆಳಿಗ್ಗೆ ದಿಢೀರ್ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೈತರು, ವರ್ತಕರು ಮತ್ತು ಶ್ರಮಿಕರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿದರು.

​ಮಾರುಕಟ್ಟೆಯಲ್ಲಿ ತರಕಾರಿ ಹಾಗೂ ಆಹಾರ ಧಾನ್ಯಗಳ ದರ, ಆವಕ ಹಾಗೂ ಕಮಿಷನ್ ದಂದೆ ಕುರಿತು ವ್ಯಾಪಾರಸ್ಥರಿಂದ ನೇರವಾಗಿ ಮಾಹಿತಿ ಪಡೆದ ಅವರು, ರೈತರ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

​ಪರಿಶೀಲನೆ ಹಾಗೂ ಪ್ರಮುಖ ಮುಖ್ಯಾಂಶಗಳು:

​ಆಮದು ಮತ್ತು ದರ ಪರಿಶೀಲನೆ: ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಹೊರರಾಜ್ಯಗಳಿಂದ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾರುಕಟ್ಟೆಗೆ ಬರುವ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಆಲೂಗಡ್ಡೆ ಇತ್ಯಾದಿ ಪದಾರ್ಥಗಳ ಲಭ್ಯತೆ, ದರ ಹಾಗೂ ಗುಣಮಟ್ಟದ ಕುರಿತು ವರ್ತಕರಿಂದ ವಿವರ ಪಡೆದುಕೊಂಡರು.

​ಮಧ್ಯವರ್ತಿಗಳ ಕಮಿಷನ್ ದಂದೆಗೆ ತಡೆ: ರೈತರಿಂದ ಪಡೆಯುತ್ತಿರುವ ಕಮಿಷನ್ ಪ್ರಮಾಣ ಮತ್ತು ಮಾರುಕಟ್ಟೆಯ ಲಾಭಾಂಶದ ವ್ಯತ್ಯಾಸಗಳ ಕುರಿತು ಕಳವಳ ವ್ಯಕ್ತಪಡಿಸಿದ ಸಿಎಂ, ರೈತರಿಗೆ ಅನ್ಯಾಯವಾಗದಂತೆ ಪಾರದರ್ಶಕ ವ್ಯವಸ್ಥೆ ರೂಪಿಸುವುದಾಗಿ ಭರವಸೆ ನೀಡಿದರು.

​ಬಾಲಕಾರ್ಮಿಕ ಪದ್ಧತಿ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಮಾರುಕಟ್ಟೆಯಲ್ಲಿ ಸಣ್ಣ ವಯಸ್ಸಿನ ಮಕ್ಕಳು ಕಠಿಣ ಶ್ರಮದ ಕೆಲಸಗಳಲ್ಲಿ ತೊಡಗಿರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಬಾಲಕಾರ್ಮಿಕರನ್ನು ನೆಮಿಸಿಕೊಂಡವರ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಿ ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

​ಮೂಲಸೌಕರ್ಯ ಪರಿಶೀಲನೆ: ಮಾರುಕಟ್ಟೆ ಆವರಣದಲ್ಲಿರುವ ಶೌಚಾಲಯಗಳ ನೈರ್ಮಲ್ಯ, ಪಾರ್ಕಿಂಗ್ ವ್ಯವಸ್ಥೆ ಹಾಗೂ ಕಾರ್ಮಿಕರ ವಸತಿ ಬೇಡಿಕೆಗಳನ್ನು ವೀಕ್ಷಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

​”ರಾಜ್ಯದ ಆರ್ಥಿಕತೆಗೆ ಬೆನ್ನೆಲುಬಾಗಿರುವ ರೈತರು ಮತ್ತು ವ್ಯಾಪಾರಿಗಳ ಹಿತರಕ್ಷಣೆ ನಮ್ಮ ಸರ್ಕಾರದ ಆದ್ಯತೆಯಾಗಿದೆ” ಎಂದ ಸಿಎಂ, ರಾಜ್ಯಾದ್ಯಂತ ಇರುವ APMC ಮಾರುಕಟ್ಟೆಗಳಿಗೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!