ಕಾರಾಗೃಹ ಇಲಾಖೆ ಆಧುನೀಕರಣಕ್ಕೆ ಸಚಿವ ಸಂಪುಟ ಅನುಮೋದನೆ: AI ಕ್ಯಾಮೆರಾ, ಜಾಮರ್ ಅಳವಡಿಕೆ

ಬೆಂಗಳೂರು : ರಾಜ್ಯದ ಕಾರಾಗೃಹ ಇಲಾಖೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಬಲಪಡಿಸುವ ನಿಟ್ಟಿನಲ್ಲಿ ವಿವಿಧ ಅತ್ಯಾಧುನಿಕ ಉಪಕರಣಗಳ ಖರೀದಿ ಹಾಗೂ ಅಳವಡಿಕೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಗೃಹ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ಪ್ರಸ್ತಾವನೆಗೆ ಅಂಕಿತ ಬಿದ್ದಿದ್ದು, ಜೈಲುಗಳ ಭದ್ರತೆ, ಕಟ್ಟುನಿಟ್ಟಿನ ಮೇಲ್ವಿಚಾರಣೆ ಹಾಗೂ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ಅಳವಡಕೆಯಾಗಲಿರುವ ಅತ್ಯಾಧುನಿಕ ತಂತ್ರಜ್ಞಾನಗಳು:
AI ಆಧಾರಿತ ಕ್ಯಾಮೆರಾಗಳು: ಕಾರಾಗೃಹಗಳ ಒಳಗಿನ ಚಟುವಟಿಕೆಗಳ ಮೇಲೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ನಿರಂತರ ಕಣ್ಣಿಡಲು ಸಿಸಿಟಿವಿಗಳನ್ನು ಅಳವಡಿಸಲಾಗುತ್ತದೆ.
ಪೋರ್ಟಬಲ್ ಸಿಗ್ನಲ್ ಜಾಮರ್ಗಳು: ಜೈಲಿನೊಳಗಿಂದ ನಡೆಯುವ ಅನಧಿಕೃತ ಮೊಬೈಲ್ ನೆಟ್ವರ್ಕ್ ಹಾಗೂ ಸಂಪರ್ಕಗಳನ್ನು ಸಂಪೂರ್ಣವಾಗಿ ತಡೆಯಲು ಪೋರ್ಟಬಲ್ ಜಾಮರ್ಗಳನ್ನು ಬಳಸಿ ಭದ್ರತೆ ಹೆಚ್ಚಿಸಲಾಗುತ್ತದೆ.
ಕೈದಿಗಳ ದೂರವಾಣಿ ಕರೆ ವ್ಯವಸ್ಥೆ (Prisoner Calling System): ಕೈದಿಗಳು ನಿಯಮಾನುಸಾರ ಕುಟುಂಬಸ್ಥರೊಂದಿಗೆ ಮಾತನಾಡಲು ಸುರಕ್ಷಿತ ಹಾಗೂ ಪರಿಣಾಮಕಾರಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ.
ಬದಲಾಗುತ್ತಿರುವ ಸವಾಲುಗಳಿಗೆ ಅನುಗುಣವಾಗಿ ಕಾರಾಗೃಹ ಇಲಾಖೆಯಲ್ಲೂ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸುವುದು ಅತ್ಯಗತ್ಯವಾಗಿದ್ದು, ಅಕ್ರಮ ಚಟುವಟಿಕೆಗಳಿಗೆ ಶಾಶ್ವತ ತಡೆ ಹಾಕಲು ಈ ಶಕ್ತಿಶಾಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.



