ಕಸುವಿನಹಳ್ಳಿಯಲ್ಲಿ ಕೆರೆಗೇ ಮಾರಕವಾದ ಎಂ.ಸ್ಯಾಂಡ್ ಧೂಳು: ಕ್ರಷರ್ ಮಾಲೀಕನ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

ನಂಜನಗೂಡು: ತಾಲೂಕಿನ ಕಸುವಿನಹಳ್ಳಿ ಗ್ರಾಮದ ಸಾರ್ವಜನಿಕ ಕೆರೆಯ ಬಳಿ ಎಂ.ಸ್ಯಾಂಡ್ ಕ್ರಷರ್‌ನ ತ್ಯಾಜ್ಯ ಹಾಗೂ ಧೂಳನ್ನು ರಾಜಾರೋಷವಾಗಿ ಸುರಿಯಲಾಗುತ್ತಿದ್ದು, ಕೆರೆ ಆವರಿಸಿಕೊಳ್ಳುತ್ತಿರುವ ಎಂ.ಸ್ಯಾಂಡ್ ರಾಶಿಯಿಂದ ಸ್ಥಳೀಯ ಗ್ರಾಮಸ್ಥರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಸರ್ವೆ ನಂ.102/3ರಲ್ಲಿರುವ ಸಾರ್ವಜನಿಕ ಕೆರೆಯು ಹಲವು ವರ್ಷಗಳಿಂದ ಈ ಭಾಗದ ಜನರಿಗೆ ಕುಡಿಯುವ ನೀರು ಹಾಗೂ ದೈನಂದಿನ ಬಳಕೆಗೆ ಜೀವನಾಡಿಯಾಗಿದೆ. ಆದರೆ, ಸಮೀಪದಲ್ಲಿರುವ ಕ್ರಷರ್ ಮಾಲೀಕರು ಕ್ರಷರ್‌ನಿಂದ ಬರುವ ವೇಸ್ಟ್ ಧೂಳನ್ನು ಸಾರ್ವಜನಿಕ ರಸ್ತೆ ಹಾಗೂ ಅಂಬೇಡ್ಕರ್ ಹಾಸ್ಟೆಲ್ ಆವರಣದಲ್ಲಿ ಸುರಿದು ಕಿರಿಕಿರಿ ಉಂಟುಮಾಡಿದ್ದಲ್ಲದೆ, ಇದೀಗ ನೇರವಾಗಿ ಕೆರೆಯ ಅಂಗಳಕ್ಕೇ ಮಣ್ಣು ಮತ್ತು ಧೂಳನ್ನು ಸುರಿಯುತ್ತಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಕಿಡಿ:
ಈ ಕುರಿತು ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಸಾಕಷ್ಟು ಬಾರಿ ದೂರು ನೀಡಿದ್ದಾರೆ. ದೂರಿನ ಅನ್ವಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ನೆಪಮಾತ್ರಕ್ಕೆ ನೋಟೀಸ್ ಜಾರಿಗೊಳಿಸಿ ಸುಮ್ಮನಾಗಿದ್ದು, ಕ್ರಷರ್ ಮಾಲೀಕ ನೋಟೀಸ್‌ಗೂ ಕ್ಯಾರೆ ಎನ್ನದೆ ಕೆರೆ ಅಂಗಳವನ್ನು ಆಕ್ರಮಿಸಿಕೊಳ್ಳುತ್ತಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೆರೆಯ ಪರಿಸರ ಹಾಳಾಗುವುದನ್ನು ತಡೆದು, ಸಾರ್ವಜನಿಕರು ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಎಂ.ಸ್ಯಾಂಡ್ ಧೂಳಿನಿಂದ ಮುಕ್ತಿ ನೀಡಲು ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳು ತಕ್ಷಣವೇ ಗಂಭೀರ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.



