ಹೆದ್ದಾರಿಗಳಲ್ಲಿ ಸುರಕ್ಷಿತ ಸಂಚಾರಕ್ಕೆ ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಕಾರವಾರ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾರ್ವಜನಿಕರು ಹಾಗೂ ವಾಹನಗಳ ಅಪಘಾತ ರಹಿತ ಸುರಕ್ಷಿತ ಸಂಚಾರಕ್ಕಾಗಿ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ನಿರ್ದೇಶನ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ನೀಡಲಾದ ಪ್ರಮುಖ ಸೂಚನೆಗಳು:
ಕಾರವಾರ ಕಾಳಿ ಸೇತುವೆ ಹಾಗೂ ಫ್ಲೈ ಓವರ್: ಕಾಳಿ ಸೇತುವೆ ಮೇಲೆ ಗಾಳಿಯ ರಭಸಕ್ಕೆ ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಸುರಕ್ಷತಾ ಕ್ರಮ ವಹಿಸಬೇಕು. ಫ್ಲೈ ಓವರ್ ಕೆಳಗಿನ ಅನಧಿಕೃತ ಪಾರ್ಕಿಂಗ್ ತಡೆದು ಫೆನ್ಸಿಂಗ್, ಗಾರ್ಡನಿಂಗ್ ಹಾಗೂ ವಾಕಿಂಗ್ ಪಾಥ್ ನಿರ್ಮಿಸಬೇಕು.
ಕುಮಟಾ ಹಾಗೂ ಮುರುಡೇಶ್ವರ-ಅಂಕೋಲಾ: ಕುಮಟಾದಲ್ಲಿ ಡಿವೈಡರ್ ಮತ್ತು ಬೀದಿ ದೀಪ ಅಳವಡಿಸಬೇಕು. ಹೆದ್ದಾರಿ ಪಕ್ಕದಲ್ಲಿ ಟ್ರಕ್ ಟರ್ಮಿನಲ್ ಹಾಗೂ ಚಾಲಕರ ವಿಶ್ರಾಂತಿಗಾಗಿ ಮೂಲಭೂತ ಸೌಕರ್ಯ ಕಲ್ಪಿಸಬೇಕು.
ಅಂಕೋಲಾ-ಯಲ್ಲಾಪುರ ರಸ್ತೆ: ರಸ್ತೆಗೆ ಅಡ್ಡಲಾಗಿರುವ ಮರದ ಕೊಂಬೆಗಳನ್ನು ತೆರವುಗೊಳಿಸಿ, ಸೂಚನಾ ಫಲಕಗಳು, ಬ್ಲಿಂಕಿಂಗ್ ಲೈಟ್ಗಳು, ಕ್ಯಾಟ್ ಐ ಹಾಗೂ ಅರೆಬೈಲ್ ಘಾಟ್ನಲ್ಲಿ ರೇಡಿಯಂ ಸ್ಟಿಕ್ಕರ್ಗಳನ್ನು ಅಳವಡಿಸಬೇಕು.
ಅತಿಯಾದ ಸರಕು ಸಾಗಣೆ ನಿಯಂತ್ರಣ: ಆರ್ಟಿಒ ಅಧಿಕಾರಿಗಳು ನಿರಂತರ ತಪಾಸಣೆ ನಡೆಸಿ, ಮಿತಿಗಿಂತ ಹೆಚ್ಚು ಸರಕು ಸಾಗಿಸುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಹಾಗೂ ಚಾಲನಾ ಪರವಾನಗಿ ವಿತರಣೆಗೆ ವಿಶೇಷ ಕ್ಯಾಂಪ್ ಆಯೋಜಿಸಬೇಕು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಮಾತನಾಡಿ, ಹೆದ್ದಾರಿಯಲ್ಲಿ ಎಎನ್ಪಿಆರ್ (ANPR) ಕ್ಯಾಮೆರಾ, ಬ್ಲಾಕ್ ಸ್ಪಾಟ್ಗಳಲ್ಲಿ ಸುರಕ್ಷತಾ ಕ್ರಮಗಳು ಹಾಗೂ ಬೀಡಾಡಿ ದನಗಳ ನಿಯಂತ್ರಣಕ್ಕೆ ಕ್ರಮ ವಹಿಸಲು ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ, ಜಿ.ಪಂ. ಉಪಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.



