ಕೊಡಗು ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕ ಸಿಬ್ಬಂದಿಗೆ ಅಧಿಕ ಸಂಭಾವನೆ: ಸಮಗ್ರ ತನಿಖೆಗೆ ರೈತ ಸಂಘ ಆಗ್ರಹ!

ಕೊಡಗು ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕ ಸಿಬ್ಬಂದಿಯೊಬ್ಬರಿಗೆ ನೀಡಲಾಗುತ್ತಿರುವ ಗರಿಷ್ಠ ಸಂಭಾವನೆ ವಿಚಾರವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಕಾರ್ಮಿಕ ಕಾಯ್ದೆಗೆ ವಿರುದ್ಧ ಎಂದು ಆರೋಪ:
ವಿಚಾರದ ಕುರಿತು ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಪ್ರಧಾನ ಸಂಚಾಲಕ ಡಾ. ಅರುಣ್ ಕುಮಾರ್, “ಕರ್ನಾಟಕದ ಯಾವುದೇ ವಿಶ್ವವಿದ್ಯಾನಿಲಯಗಳಲ್ಲಿಯೂ ತಾತ್ಕಾಲಿಕ ಸಿಬ್ಬಂದಿಗೆ ಇಷ್ಟೊಂದು ಸಂಭಾವನೆ ನೀಡಲಾಗುತ್ತಿಲ್ಲ. ಇಂತಹ ಗರಿಷ್ಠ ಸಂಭಾವನೆ ನೀಡುವುದು ನಿಯಮ ಹಾಗೂ ಕಾರ್ಮಿಕ ಕಾಯ್ದೆಗೆ ಸಂಪೂರ್ಣ ವಿರುದ್ಧವಾಗಿದೆ,” ಎಂದು ಆರೋಪಿಸಿದ್ದಾರೆ.
ಈಗಾಗಲೇ ವಿಶ್ವವಿದ್ಯಾಲಯವು ಅನುದಾನದ ಕೊರತೆಯಿಂದ ಡೋಲಾಯಮಾನ ಸ್ಥಿತಿಯಲ್ಲಿದ್ದು, ಒಬ್ಬ ವ್ಯಕ್ತಿಗೆ ಅಧಿಕ ಸಂಭಾವನೆ ನೀಡುವುದರಿಂದ ಸಂಸ್ಥೆಗೆ ಯಾವುದೇ ಪ್ರಯೋಜನವಿಲ್ಲ, ಬದಲಾಗಿ ಭಾರಿ ಆರ್ಥಿಕ ನಷ್ಟ ಉಂಟಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಶಾಸಕರಿಗೆ ಹಾಗೂ ಕುಲಪತಿಗಳಿಗೆ ಮನವಿ:
ಈ ಹಿನ್ನೆಲೆಯಲ್ಲಿ ಶಾಸಕ ಡಾ. ಮಂಥರ್ ಗೌಡ ಅವರು ಈ ವಿಷಯವನ್ನು ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಜೊತೆಗೆ, ಅಧಿಕ ಸಂಭಾವನೆ ಪಡೆಯುತ್ತಿರುವ ವ್ಯಕ್ತಿಯ ನೇಮಕಾತಿ ಹಾಗೂ ವೇತನ ಪ್ರಮಾಣದ ಕುರಿತು ವಿಶ್ವವಿದ್ಯಾಲಯದ ಕುಲಪತಿಗಳು ಪುನರ್ ಪರಿಶೀಲನೆ ನಡೆಸಬೇಕು. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಹಾಗೂ ಸಾಮಾಜಿಕ ನ್ಯಾಯ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಡಾ. ಅರುಣ್ ಕುಮಾರ್ ಆಗ್ರಹಿಸಿದ್ದಾರೆ.
ಉಗ್ರ ಹೋರಾಟದ ಎಚ್ಚರಿಕೆ:
“ಕೊಡಗಿನ ಜನತೆ ಒಬ್ಬ ಅಧಿಕಾರದಲ್ಲಿರುವ ಕುಲಪತಿಯ ಉದ್ಧಾರಕ್ಕಾಗಿ ಇಲ್ಲ,” ಎಂದು ಕಿಡಿಕಾರಿದ ಸಂಘಟನೆಯ ನಾಯಕರು, ಈ ಅಕ್ರಮ ಮತ್ತು ತಾರತಮ್ಯದ ವಿರುದ್ಧ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ರೂಪಿಸುವುದಾಗಿ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ.



