ನವೆಂಬರ್ 28-29 ರಂದು ಮಂಗಳೂರಿನಲ್ಲಿ ‘ಜನನುಡಿ – 2026’: ಸಂವಿಧಾನ ಮತ್ತು ದೇಶದ ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚೆಗೆ ಕರೆಯನ್ನು ನೀಡಿದ ‘ಅಭಿಮತ’

ಮಂಗಳೂರು: ಪ್ರಸಕ್ತ ಕಾಲಘಟ್ಟದ ಅಗತ್ಯತೆ ಹಾಗೂ ನಾಡಿನ ಹಲವೆಡೆಯ ಪ್ರಗತಿಪರ ಚಿಂತಕರ ಅಭಿಪ್ರಾಯದಂತೆ, ಮುಂಬರುವ ನವೆಂಬರ್ 28 ಮತ್ತು 29 ರಂದು ಮಂಗಳೂರಿನಲ್ಲಿ ‘ಜನನುಡಿ – 2026’ ಸಮ್ಮೇಳನವನ್ನು ಆಯೋಜಿಸಲು ‘ಅಭಿಮತ ಮಂಗಳೂರು’ ಸಂಘಟನೆ ತೀರ್ಮಾನಿಸಿದೆ.
ಈ ಕುರಿತು ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಪ್ರಾಥಮಿಕ ಪೂರ್ವಭಾವಿ ಸಭೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 50ಕ್ಕೂ ಹೆಚ್ಚು ಬರಹಗಾರರು, ರಂಗಕರ್ಮಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಚಿಂತಕರು ಭಾಗವಹಿಸಿ, ‘ಜನನುಡಿ’ ಆಯೋಜನೆಯನ್ನು ಒಕ್ಕೊರಲಿನಿಂದ ಬೆಂಬಲಿಸಿದರು.
ದೇಶದ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ವಲಯದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಮಾನಗಳು, ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಒಡ್ಡುತ್ತಿರುವ ಸವಾಲುಗಳ ಕುರಿತು ಜನನುಡಿಯಲ್ಲಿ ಗಂಭೀರ ಚರ್ಚೆಗಳು ನಡೆಯಬೇಕು ಎಂದು ಸಭೆಯಲ್ಲಿ ಸಲಹೆ ನೀಡಲಾಯಿತು. ರಾಜ್ಯದ ವಿವಿಧ ಭಾಗಗಳಲ್ಲಿರುವ ಸಂಘಟನೆಯ ಸಹಭಾಗಿಗಳ ಸಲಹೆಗಳನ್ನು ಕ್ರೋಡೀಕರಿಸಿ ವಿಚಾರಗೋಷ್ಠಿಗಳನ್ನು ರೂಪಿಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು.
ಸಮಾನಮನಸ್ಕರ ಒಗ್ಗೂಡುವಿಕೆಗೆ ಕರೆ:
ಜನಪರ ಮನಸ್ಸುಗಳು ಹಾಗೂ ಬಹುಸಂಸ್ಕೃತಿಯ ಪ್ರತಿಪಾದಕರ ಸಹಭಾಗಿತ್ವದಿಂದ ಜನನುಡಿ ಕಾರ್ಯಕ್ರಮವು ಮೂಡಿಬರಲಿದೆ. ಈ ನಿಟ್ಟಿನಲ್ಲಿ ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಸಮಾನಮನಸ್ಕ ಸಂಘಟನೆಗಳು, ಸಾಹಿತಿಗಳು ಹಾಗೂ ಚಿಂತಕರು ಪೂರ್ವಭಾವಿ ಸಭೆ ಮತ್ತು ಸುದ್ದಿಗೋಷ್ಠಿಗಳನ್ನು ನಡೆಸಿ ಮಂಗಳೂರಿನತ್ತ ಆಗಮಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.
ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ (ನ. 28, 29) ಮಂಗಳೂರಿನಲ್ಲಿ ನಡೆಯಲಿರುವ ಈ ವಿಚಾರಪೂರ್ಣ ಚರ್ಚೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ನಾಡಿನ ಜನಪರ ಮನಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಕೋರಲಾಗಿದೆ.



