ಬೆಂಗಳೂರು: ಪತ್ನಿಯ ವಿಕೃತ ಬೇಡಿಕೆಗೆ ಬೆಚ್ಚಿಬಿದ್ದ ಪತಿ; ಗೆಳತಿಯರೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ಒತ್ತಾಯಿಸಿ ಕಿರುಕುಳ!

ಬೆಂಗಳೂರು: ಪತ್ನಿಯ ಅತಿರೇಕದ ಲೈಂಗಿಕ ಬೇಡಿಕೆಗಳು ಹಾಗೂ ಮಾನಸಿಕ ಕಿರುಕುಳ ತಾಳಲಾರದೆ ಪತಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿರುವ ವಿಚಿತ್ರ ಹಾಗೂ ಆಘಾತಕಾರಿ ಘಟನೆ ನಗರದ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ದೂರುದಾರ ಪತಿಯ ಪ್ರಕಾರ, ಮದುವೆಯ ಆರಂಭದಲ್ಲಿ ದಂಪತಿಗಳ ನಡುವೆ ಎಲ್ಲವೂ ಸುಸೂತ್ರವಾಗಿತ್ತು. ಆದರೆ, ದಿನ ಕಳೆದಂತೆ ಪತ್ನಿಯ ವರ್ತನೆಯಲ್ಲಿ ಭಾರೀ ಬದಲಾವಣೆ ಕಂಡುಬಂದಿದೆ. ಪತ್ನಿಯು ಕೇವಲ ತನ್ನೊಂದಿಗೆ ಮಾತ್ರವಲ್ಲದೆ, ತನ್ನ ಆಪ್ತ ಗೆಳತಿಯರ ಜೊತೆಗೂ ದೈಹಿಕ ಸಂಬಂಧ ಹೊಂದುವಂತೆ ಪತಿಯನ್ನು ನಿರಂತರವಾಗಿ ಒತ್ತಾಯಿಸುತ್ತಿದ್ದಳು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ವಿಕೃತ ಬೇಡಿಕೆಗೆ ಪತಿ ಒಪ್ಪದಿದ್ದಾಗ, ಆಕೆಗೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಲು ಆರಂಭಿಸಿದ್ದಾಳೆ. ಅಷ್ಟೇ ಅಲ್ಲದೆ, ತನ್ನ ಹಳೆಯ ಸಂಬಂಧಗಳ ಬಗ್ಗೆ ಪದೇ ಪದೇ ಪ್ರಸ್ತಾಪಿಸಿ ಪತಿಯ ನೆಮ್ಮದಿ ಕೆಡಿಸುತ್ತಿದ್ದಳು. ತಡರಾತ್ರಿಯವರೆಗೂ ಸ್ನೇಹಿತರೊಂದಿಗೆ ಸುತ್ತುವುದು ಮತ್ತು ಮದ್ಯಪಾನ ಮಾಡುವುದನ್ನು ಪ್ರಶ್ನಿಸಿದರೆ ಪತಿಯ ಮೇಲೆ ದೌರ್ಜನ್ಯ ಎಸಗುತ್ತಿದ್ದಳು ಎನ್ನಲಾಗಿದೆ. ಪತಿಗೆ ಅಶ್ಲೀಲ ವಿಡಿಯೋ ಹಾಗೂ ಚಾಟ್‌ಗಳನ್ನು ಕಳುಹಿಸಿ ವಿಕೃತಿ ಮೆರೆಯುತ್ತಿದ್ದಳು ಎಂದು ಪತಿ ಆಕ್ರೋಶ ಹೊರಹಾಕಿದ್ದಾರೆ.
ಪತ್ನಿಯ ಮೇಲಿನ ನಂಬಿಕೆಯಿಂದ ಪತಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ನೀಡಿದ್ದರು. ಆದರೆ ಈಗ ವಿರಸ ಉಂಟಾದ ನಂತರ ಆ ಒಡವೆಗಳನ್ನು ವಾಪಸ್ ನೀಡದೆ ಪತ್ನಿ ಸತಾಯಿಸುತ್ತಿದ್ದಾಳೆ. ಈ ಹಿಂದೆ ಹಿರಿಯರ ಸಮ್ಮುಖದಲ್ಲಿ ಪಂಚಾಯ್ತಿ ನಡೆದಿದ್ದರೂ ಪತ್ನಿಯ ವರ್ತನೆಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.
ಪತ್ನಿಯ ಕಿರುಕುಳದ ಎಲ್ಲಾ ದಾಖಲೆಗಳು, ಅಶ್ಲೀಲ ಚಾಟ್‌ಗಳು ಮತ್ತು ವಿಡಿಯೋಗಳನ್ನು ಸಾಕ್ಷ್ಯವಾಗಿಟ್ಟುಕೊಂಡು ಪತಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.



