ಜಿಲ್ಲಾ ಸುದ್ದಿತಾಲೂಕುರಾಜ್ಯ ಸುದ್ದಿಸ್ಥಳೀಯ ಸುದ್ದಿಗಳು

ಬೆಂಗಳೂರಿನ ಇತಿಹಾಸಕ್ಕೆ 700 ವರ್ಷಗಳ ಸಾಕ್ಷಿ: ಕಟ್ಟಿಗೇನಹಳ್ಳಿಯ ಶಾಸನದಲ್ಲಿ ವಿಜಯನಗರ ಕಾಲದ ಉಲ್ಲೇಖ ಪತ್ತೆ

Share News

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಉತ್ತರ ಭಾಗದಲ್ಲಿರುವ ಯಲಹಂಕ ಸಮೀಪದ ಕಟ್ಟಿಗೇನಹಳ್ಳಿ ಕೇವಲ ಬಡಾವಣೆಯಲ್ಲ, ಅದೊಂದು 700 ವರ್ಷಗಳ ಸುದೀರ್ಘ ಇತಿಹಾಸವಿರುವ ಪುರಾತನ ಗ್ರಾಮ ಎಂಬುದು ಇತ್ತೀಚಿನ ಸಂಶೋಧನೆಯಿಂದ ಸಾಬೀತಾಗಿದೆ. ಸಾ.ಶ. 1341ರ ಕಾಲದ ಶಿಲಾಶಾಸನವೊಂದು ಈ ಗ್ರಾಮದ ಪ್ರಾಚೀನತೆ ಹಾಗೂ ಅಂದಿನ ಆಡಳಿತ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲಿದೆ.

ಕಟ್ಟಿಗೇನಹಳ್ಳಿಯಲ್ಲಿ ದೊರೆತಿರುವ ಈ ಶಿಲಾಶಾಸನವು ವಿಜಯನಗರ ಸಾಮ್ರಾಜ್ಯದ ಆರಂಭದ ಕಾಲಕ್ಕೆ ಸೇರಿದ್ದಾಗಿದೆ. ಶಾಸನದಲ್ಲಿ ಈ ಗ್ರಾಮವನ್ನು ‘ಕಟ್ಟಿಗೆಹಳ್ಳಿ’ ಎಂದು ಉಲ್ಲೇಖಿಸಲಾಗಿದೆ. ವಿಶೇಷವೆಂದರೆ, ವಿಜಯನಗರದ ಸ್ಥಾಪಕ ಅರಸರಾದ ಒಂದನೇ ಹರಿಹರ (ಹರಿಯಪ್ಪ ವೊಡೆಯ) ಮತ್ತು ಒಂದನೇ ಬುಕ್ಕರಾಯ (ಬುಕ್ಕಣ್ಣ ವೊಡೆಯ) ಅವರು ರಾಜ್ಯವಾಳುತ್ತಿದ್ದ ಕಾಲದಲ್ಲೇ ಈ ಗ್ರಾಮವು ಅಸ್ತಿತ್ವದಲ್ಲಿತ್ತು ಎಂಬುದು ವಿಶೇಷ.

ಇದೊಂದು ಪ್ರಮುಖ ‘ದಾನ ಶಾಸನ’ವಾಗಿದ್ದು, ಅಂದಿನ ಮಹಾಸಾಮಂತಾಧಿಪತಿ ಮೈಲೆಯನಾಯ್ಕ ಹಾಗೂ ಯಲಹಂಕ ನಾಡಿನ ಪ್ರಭುಗಳಾದ ಬೈರಿದೇವ, ಮಾಚಿದೇವ ಸೇರಿದಂತೆ ಸಮಸ್ತ ಗೌಡರುಗಳು ಸೇರಿ, ಬೈರಿಸೆಟ್ಟಿಯ ಮಗ ಕಚ್ಚೆಯನಾಯ್ಕನಿಗೆ ಕಟ್ಟಿಗೇನಹಳ್ಳಿಯನ್ನು ದಾನವಾಗಿ ನೀಡಿದ್ದನ್ನು ಈ ಶಾಸನ ವಿವರಿಸುತ್ತದೆ. ಇದು ಅಂದಿನ ಕಾಲದ ಸಾಮಾಜಿಕ ಮತ್ತು ಆಡಳಿತಾತ್ಮಕ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ.

14ನೇ ಶತಮಾನದ ಕಾಲಘಟ್ಟದಲ್ಲಿಯೇ ‘ಯಲಹಂಕನಾಡು’ ಎಂಬ ಆಡಳಿತ ವಿಭಾಗಕ್ಕೆ ಒಳಪಟ್ಟಿದ್ದ ಈ ಪ್ರದೇಶವು ಇಂದಿಗೂ ತನ್ನ ಹೆಸರನ್ನು ಉಳಿಸಿಕೊಂಡು ಬಂದಿರುವುದು ಐತಿಹಾಸಿಕ ಅಚ್ಚರಿ. ಈ ಶಾಸನ ಕಲ್ಲನ್ನು ಆಧುನಿಕ ತಂತ್ರಜ್ಞಾನದ ಮೂಲಕ 3ಡಿ ಡಿಜಿಟಲ್ ರೂಪದಲ್ಲಿ ಸಂರಕ್ಷಿಸಲಾಗಿದೆ. ಶಾಸನದ ಮೇಲಿರುವ ‘ಕಟ್ಟಿಗೆಹಳ್ಳಿ’ ಎಂಬ ಅಕ್ಷರಗಳನ್ನು ಈಗಲೂ ಸ್ಪಷ್ಟವಾಗಿ ಗುರುತಿಸಬಹುದಾಗಿದ್ದು, ಇದು ಮುಂದಿನ ಪೀಳಿಗೆಗೆ ಇತಿಹಾಸವನ್ನು ರವಾನಿಸಲು ಸಹಕಾರಿಯಾಗಿದೆ.

​ಬೆಂಗಳೂರಿನ ಸ್ಥಳನಾಮಗಳ ಇತಿಹಾಸವನ್ನು ಹುಡುಕುವ ಸರಣಿಯಲ್ಲಿ ಕಟ್ಟಿಗೇನಹಳ್ಳಿಯ ಈ ಶಾಸನವು ಒಂದು ಪ್ರಮುಖ ಮೈಲಿಗಲ್ಲಾಗಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!