ಅರಕಲಗೂಡು: ಗ್ಯಾಸ್ ಸಿಲಿಂಡರ್ ಸ್ಫೋಟ; ಮಹಿಳೆ, ಮಗು ಸೇರಿ ನಾಲ್ವರಿಗೆ ಗಾಯ, ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಹಾಸನ: ಜಿಲ್ಲೆಯ ಅರಕಲಗೂಡು ತಾಲೂಕಿನ ಕೆ. ಅಬ್ಬೂರು ಗ್ರಾಮದಲ್ಲಿ ಅಡುಗೆ ಅನಿಲದ ಸಿಲಿಂಡರ್ ಬದಲಾಯಿಸುವ ವೇಳೆ ಸಂಭವಿಸಿದ ಭೀಕರ ಸ್ಫೋಟದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿವೆ.
ಗ್ರಾಮದ ನಿವಾಸಿ ಸುಂದರೇಶ್ ಎಂಬುವವರ ಮನೆಯಲ್ಲಿ ಮಂಗಳವಾರ ಈ ದುರ್ಘಟನೆ ನಡೆದಿದೆ. ಮನೆಯಲ್ಲಿ ಖಾಲಿಯಾದ ಗ್ಯಾಸ್ ಸಿಲಿಂಡರ್ ಬದಲಿಸಿ ಹೊಸದನ್ನು ಅಳವಡಿಸುವಾಗ ಆಕಸ್ಮಿಕವಾಗಿ ಅನಿಲ ಸೋರಿಕೆಯಾಗಿದೆ (Gas Leakage). ಈ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಸಿಲಿಂಡರ್ ಸ್ಫೋಟಗೊಂಡಿದೆ ಎನ್ನಲಾಗಿದೆ.
ಸ್ಫೋಟದ ರಭಸಕ್ಕೆ ಮನೆಯಲ್ಲಿದ್ದ ಮಹಿಳೆ, ಆಕೆಯ ಪುತ್ರ ಸೇರಿದಂತೆ ಒಟ್ಟು ನಾಲ್ವರಿಗೆ ಸುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಕೊಣನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಫೋಟದ ತೀವ್ರತೆಗೆ ಮನೆಯ ಕಿಟಕಿ, ಬಾಗಿಲುಗಳು ಜಖಂಗೊಂಡಿದ್ದು, ಮನೆಯಲ್ಲಿದ್ದ ಪೀಠೋಪಕರಣಗಳು, ಎಲೆಕ್ಟ್ರಾನಿಕ್ ಉಪಕರಣಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಸ್ಫೋಟದ ಶಬ್ದ ಕೇಳಿ ಗ್ರಾಮಸ್ಥರು ಭಯಭೀತರಾಗಿ ಓಡಿ ಬಂದಿದ್ದು, ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಕೊಣನೂರು ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಅಗ್ನಿ ಅವಘಡಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.



