ಹುಬ್ಬಳ್ಳಿ: ರಸ್ತೆಗೆ ಬಿದ್ದ ಕೇಬಲ್ ವೈರ್ ಯುವಕರ ಪಾಲಿಗೆ ಮೃತ್ಯುಪಾಶ; ಇಬ್ಬರು ಬೈಕ್ ಸವಾರರು ಸಾವು

ಹುಬ್ಬಳ್ಳಿ: ನಗರದ ಗೋಕುಲ್ ರಸ್ತೆಯಲ್ಲಿ ಕಡಿದು ಬಿದ್ದಿದ್ದ ಕೇಬಲ್ ವೈರ್ ಇಬ್ಬರು ಯುವಕರ ಪ್ರಾಣಪಕ್ಷಿ ಹಾರಿಸಿದ ಭೀಕರ ದುರಂತ ಮಂಗಳವಾರ ಮುಂಜಾನೆ ಸಂಭವಿಸಿದೆ. ರಸ್ತೆಯಲ್ಲಿ ನೇತಾಡುತ್ತಿದ್ದ ವೈರ್ ಬೈಕ್ ಸವಾರರ ಪಾಲಿಗೆ ಮೃತ್ಯುಪಾಶವಾಗಿ ಪರಿಣಮಿಸಿದೆ.
ಇಲ್ಲಿನ ಗೋಕುಲ್ ರಸ್ತೆಯ ಅರ್ಬನ್ ಓಯಾಸಿಸ್ ಮಾಲ್ ಸಮೀಪ ಈ ಘಟನೆ ನಡೆದಿದೆ. ಮೃತರನ್ನು ಹುಬ್ಬಳ್ಳಿಯ ತಾಜ್ ನಗರದ ನಿವಾಸಿಗಳಾದ ಫಯಾಜ್ (25) ಮತ್ತು ಮುಜಾಮಿಲ್ (27) ಎಂದು ಗುರುತಿಸಲಾಗಿದೆ. ಮೃತರಿಬ್ಬರೂ 30 ವರ್ಷದೊಳಗಿನ ಹರೆಯದವರಾಗಿದ್ದು, ಅವರ ಅಕಾಲಿಕ ಮರಣ ಕುಟುಂಬಸ್ಥರಲ್ಲಿ ಶೋಕ ಸಾಗರ ಮೂಡಿಸಿದೆ.
ಮುಂಜಾನೆ ಯುವಕರಿಬ್ಬರು ಬೈಕ್ನಲ್ಲಿ ತೆರಳುತ್ತಿದ್ದಾಗ, ರಸ್ತೆಯ ಮೇಲೆ ಕಡಿದು ಬಿದ್ದಿದ್ದ ಕೇಬಲ್ ವೈರ್ ಇವರಿಗೆ ಅರಿವಿಲ್ಲದಂತೆ ಬೈಕ್ಗೆ ಸಿಲುಕಿಕೊಂಡಿದೆ. ಅತಿ ವೇಗದಲ್ಲಿದ್ದ ಬೈಕ್ ಸವಾರರು ವೈರ್ನ ಸೆಳೆತಕ್ಕೆ ಸಿಲುಕಿ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ಘಟನೆಯ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ರಸ್ತೆಗಳಲ್ಲಿ ಬೇಕಾಬಿಟ್ಟಿಯಾಗಿ ನೇತಾಡುವ ಮತ್ತು ಕಡಿದು ಬೀಳುವ ಕೇಬಲ್ ವೈರ್ಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಹಾಗೂ ಖಾಸಗಿ ಕಂಪನಿಗಳು ನಿರ್ಲಕ್ಷ್ಯ ವಹಿಸಿರುವುದೇ ಈ ಸಾವುಗಳಿಗೆ ಕಾರಣ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಗರದ ಪ್ರಮುಖ ರಸ್ತೆಗಳಲ್ಲಿ ಕೇಬಲ್ ವೈರ್ಗಳು ಮರಣಶಾಸನದಂತೆ ನೇತಾಡುತ್ತಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದು ಇಬ್ಬರು ಯುವಕರು ಬಲಿಯಾಗಿದ್ದಾರೆ,” ಎಂದು ಸ್ಥಳೀಯರು ಕಿಡಿಕಾರಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಯುವಕರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.



