Crime Newsಕ್ರೈಂ ಸುದ್ದಿರಾಜ್ಯ ಸುದ್ದಿಸ್ಥಳೀಯ ಸುದ್ದಿಗಳು

ಪ್ರೀತಿ ನಿರಾಕರಿಸಿದ್ದಕ್ಕೆ ಮೂರು ಮಕ್ಕಳ ತಾಯಿಯ ಬರ್ಬರ ಹತ್ಯೆ: ಸಿಲಿಕಾನ್ ಸಿಟಿಯಲ್ಲಿ ಉನ್ಮಾದಿಯ ಅಟ್ಟಹಾಸ

Share News

ಬೆಂಗಳೂರು, ಮಾ. 20: ಪ್ರೀತಿಯ ಹೆಸರಿನಲ್ಲಿ ಹುಚ್ಚು ಹಿಡಿದಿದ್ದ ವ್ಯಕ್ತಿಯೊಬ್ಬ, ತನ್ನ ಆಸೆಗೆ ಒಪ್ಪದ ವಿವಾಹಿತ ಮಹಿಳೆಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಮನಕಲಕುವ ಘಟನೆ ನಗರದ ಚಂದ್ರಾ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಂಡನಹಳ್ಳಿಯಲ್ಲಿ ನಡೆದಿದೆ.

​ಮೃತ ಮಹಿಳೆಯನ್ನು ಫಿರ್ದೋಸ್ ಭಾನು ಎಂದು ಗುರುತಿಸಲಾಗಿದೆ. ಇವರಿಗೆ ವಿವಾಹವಾಗಿದ್ದು, ಮೂವರು ಮಕ್ಕಳಿದ್ದಾರೆ. ಸ್ಥಳೀಯ ಆಟೋ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಅಫೀಸ್ ಎಂಬಾತ ಕಳೆದ ಕೆಲವು ತಿಂಗಳಿನಿಂದ ಫಿರ್ದೋಸ್ ಬೆನ್ನುಬಿದ್ದಿದ್ದ. “ನನ್ನನ್ನು ಪ್ರೀತಿಸು, ನನ್ನ ಜೊತೆ ಮಾತನಾಡು” ಎಂದು ಆಕೆಗೆ ನಿರಂತರವಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ.

ಆರೋಪಿ ಅಫೀಸ್ ನೀಡುತ್ತಿದ್ದ ಕಿರುಕುಳ ತಾಳಲಾರದೆ ಫಿರ್ದೋಸ್ ಈ ಹಿಂದೆ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಆರೋಪಿಯನ್ನು ಕರೆಸಿ ಬುದ್ಧಿವಾದ ಹೇಳಿ, ಇನ್ನು ಮುಂದೆ ಕಿರುಕುಳ ನೀಡದಂತೆ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದರು. ಆದರೆ, ಪೊಲೀಸರ ಎಚ್ಚರಿಕೆಯನ್ನೂ ಲೆಕ್ಕಿಸದ ಈತ ಫಿರ್ದೋಸ್ ಅವರ ಓಡಾಟದ ಮೇಲೆ ಕಣ್ಣಿಟ್ಟಿದ್ದ.

ಶುಕ್ರವಾರ ಮಧ್ಯಾಹ್ನ ಸುಮಾರು 2 ಗಂಟೆ ಸುಮಾರಿಗೆ ಫಿರ್ದೋಸ್ ಅವರು ಕೆಲಸದಲ್ಲಿದ್ದ ವೇಳೆ ಅಲ್ಲಿಗೆ ಬಂದ ಅಫೀಸ್, ಮತ್ತೆ ತನ್ನೊಂದಿಗೆ ಮಾತನಾಡುವಂತೆ ಗಲಾಟೆ ಮಾಡಿದ್ದಾನೆ. ಈ ವೇಳೆ ವಾಗ್ವಾದ ವಿಕೋಪಕ್ಕೆ ತಿರುಗಿದೆ. ಆಕ್ರೋಶಗೊಂಡ ಅಫೀಸ್ ತನ್ನ ಬಳಿಯಿದ್ದ ಚಾಕುವಿನಿಂದ ಫಿರ್ದೋಸ್ ಅವರ ಹೊಟ್ಟೆ ಮತ್ತು ಕೈಗಳಿಗೆ ಮನಬಂದಂತೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಫಿರ್ದೋಸ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

​ಕೃತ್ಯ ಎಸಗಿದ ಕೂಡಲೇ ಆರೋಪಿ ಅಫೀಸ್ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆರೋಪಿಯ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ಬಲೆ ಬೀಸಲಾಗಿದೆ.

​ಒಬ್ಬ ವ್ಯಕ್ತಿಯ ವಿಕೃತ ಮನಸ್ಥಿತಿಯಿಂದಾಗಿ ಸುಂದರ ಸಂಸಾರ ಇಂದು ಬೀದಿಗೆ ಬಿದ್ದಿದ್ದು, ತಾಯಿಯನ್ನು ಕಳೆದುಕೊಂಡ ಮೂವರು ಮಕ್ಕಳು ಅನಾಥರಾಗಿದ್ದಾರೆ. ಘಟನೆಯಿಂದ ಗಂಗೊಂಡನಹಳ್ಳಿ ಪ್ರದೇಶದಲ್ಲಿ ಶೋಕದ ಛಾಯೆ ಆವರಿಸಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!