ಅಂಕೋಲಾದಲ್ಲಿ ಕಾನೂನಿಗೆ ‘ಡೋಂಟ್ ಕೇರ್’: ಕೃಷಿ ಭೂಮಿಯಲ್ಲಿ ಭೂ ಪರಿವರ್ತನೆಯಿಲ್ಲದೆ ಅಕ್ರಮ ವಸತಿ ನಿರ್ಮಾಣ – ತೆರೆಮರೆಯ ‘ಮಾಹಿತಿ’ ಕಿಲಾಡಿಯ ಚಿತಾವಣೆಗೆ ಬಲಿಯಾದ ಮಾಲೀಕ!

*ಅಂಕೋಲಾ* : ಸ್ವಂತ ಜಮೀನಿದ್ದರೂ ಅಲ್ಲಿ ಮನೆ ಕಟ್ಟಲು ದೇಶದ ಕಾನೂನು ಮತ್ತು ಸ್ಥಳೀಯ ಸಂಸ್ಥೆಗಳ ನಿಯಮ ಪಾಲಿಸುವುದು ಕಡ್ಡಾಯ. ಆದರೆ ಅಂಕೋಲಾ ತಾಲೂಕಿನ ಹೊನ್ನೇಬೈಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾಲೀಕರೊಬ್ಬರು ಭೂ ಪರಿವರ್ತನೆಯೂ ಮಾಡದೆ, ಪಂಚಾಯತ್ ಪರವಾನಗಿಯೂ ಇಲ್ಲದೆ ಅಕ್ರಮವಾಗಿ ವಸತಿ ಕಟ್ಟಡ ನಿರ್ಮಿಸಿ ಅಧಿಕಾರಿಗಳಿಗೆ ಸವಾಲು ಹಾಕುತ್ತಿದ್ದಾರೆ.
*ನಿಯಮಗಳ ಸರಣಿ ಉಲ್ಲಂಘನೆ:*
ಹೊನ್ನೇಬೈಲ್ ಗ್ರಾಮದ ಸರ್ವೆ ನಂಬರ್ 214/6 ರ ಕೃಷಿ ಜಮೀನಿನಲ್ಲಿ ಈ ಅಕ್ರಮ ನಡೆದಿದೆ. ನಿಯಮದ ಪ್ರಕಾರ, ಯಾವುದೇ ಕೃಷಿ ಭೂಮಿಯಲ್ಲಿ ಮನೆ ಕಟ್ಟಬೇಕಾದರೆ ಮೊದಲು:
ಕಂದಾಯ ಇಲಾಖೆಯಿಂದ ಭೂ ಪರಿವರ್ತನೆ (NA) ಆಗಬೇಕು.
ನಂತರ ಪಂಚಾಯತ್ನಿಂದ ‘ಈ-ಸ್ವತ್ತು’ (ನಮೂನೆ-9) ಆಗಬೇಕು.
ತದನಂತರ ನಕ್ಷೆ ಅನುಮೋದನೆ ಪಡೆದು ಕಟ್ಟಡ ಪರವಾನಗಿ ಪಡೆಯಬೇಕು.
ಆದರೆ, ಇಲ್ಲಿ ಈ ಯಾವುದೇ ಪ್ರಕ್ರಿಯೆಗಳಿಲ್ಲದೆ ಕಾನೂನು ಬಾಹಿರವಾಗಿ ಬೃಹತ್ ಕಟ್ಟಡ ನಿರ್ಮಿಸಲಾಗಿದೆ.
*ಪಂಚಾಯಿತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ!:*
ಈ ಅಕ್ರಮದ ಕುರಿತು ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ, ಗ್ರಾಮ ಪಂಚಾಯಿತಿಯು ಕಳೆದ ಜನವರಿ 8ರಂದೇ ಕೆಲಸ ನಿಲ್ಲಿಸಲು ನೋಟಿಸ್ ನೀಡಿತ್ತು. ಆದರೆ ಪಂಚಾಯತ್ ಆದೇಶವನ್ನೂ ಲೆಕ್ಕಿಸದ ಮಾಲೀಕರು, ಈಗ ಕಟ್ಟಡಕ್ಕೆ ಸುಣ್ಣ-ಬಣ್ಣ ಹಚ್ಚಿ, ಸಾಮಾನು-ಸರಂಜಾಮು ಮತ್ತು ಸಾಕುಪ್ರಾಣಿಗಳೊಂದಿಗೆ ವಾಸ್ತವ್ಯಕ್ಕೆ ಸಜ್ಜಾಗುತ್ತಿದ್ದಾರೆ. ಒಮ್ಮೆ ಒಳಗೆ ವಾಸಕ್ಕೆ ಸೇರಿದರೆ ಯಾರೂ ಏನೂ ಮಾಡಲಾಗದು ಎಂಬ ಭ್ರಮೆಯಲ್ಲಿ ಮಾಲೀಕರಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
*ಆ ‘ಮಾಹಿತಿ’ ಕಿಲಾಡಿಯ ಕುತಂತ್ರ:*
ಈ ಕಾನೂನು ಉಲ್ಲಂಘನೆಯ ಹಿಂದೆ ಒಬ್ಬ ಸ್ವಯಂ ಘೋಷಿತ ‘ಮಾಹಿತಿ ಹಕ್ಕು ಕಾರ್ಯಕರ್ತ’ನ ಹಸ್ತಕ್ಷೇಪವಿರುವುದು ದೊಡ್ಡ ಸುದ್ದಿಯಾಗಿದೆ. ಮಾಲೀಕನಿಗೆ ತಪ್ಪು ದಾರಿ ತೋರಿಸಿ, “ಪಂಚಾಯತ್ನವರಿಗೆ ಏನೂ ಮಾಡಲು ಅಧಿಕಾರವಿಲ್ಲ, ನಾನು ನೋಡಿಕೊಳ್ಳುತ್ತೇನೆ” ಎಂದು ತೆರೆಮರೆಯಿಂದ ಸಲಹೆ ನೀಡುತ್ತಾ ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳನ್ನೇ ಮಾಹಿತಿ ಹಕ್ಕಿನ ಹೆಸರಲ್ಲಿ ಬೆದರಿಸುವ ತಂತ್ರಗಾರಿಕೆ ಇದರ ಹಿಂದಿದೆಯೇ ಎಂಬ ಅನುಮಾನ ಮೂಡಿದೆ.
*ಸುಪ್ರೀಂ ಕೋರ್ಟ್ ಆದೇಶದ ಅಸ್ತ್ರ:*
ಮಾನ್ಯ ಸರ್ವೋಚ್ಚ ನ್ಯಾಯಾಲಯ ಮತ್ತು ಕರ್ನಾಟಕ ಸರ್ಕಾರದ ಇತ್ತೀಚಿನ ಸುತ್ತೋಲೆ (RDPR/27/GPA/2025) ಇಂತಹ ಅಕ್ರಮಗಳ ವಿರುದ್ಧ ಕಠಿಣವಾಗಿದೆ. ಅಕ್ರಮ ಕಟ್ಟಡಗಳಿಗೆ ವಿದ್ಯುತ್, ನೀರು ನೀಡಬಾರದು ಮತ್ತು ಅಂತಹವುಗಳನ್ನು ನೆಲಸಮಗೊಳಿಸಲು ಪಂಚಾಯತ್ಗೆ ಪೂರ್ಣ ಅಧಿಕಾರವಿದೆ. ಒಂದು ವೇಳೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ವಿಳಂಬ ಮಾಡಿದರೆ, ಅವರು ಕೂಡ ಕರ್ತವ್ಯ ಲೋಪದಡಿ ಶಿಕ್ಷೆಗೆ ಗುರಿಯಾಗಲಿದ್ದಾರೆ.
*ಕಾನೂನು ಎಲ್ಲರಿಗೂ ಒಂದೇ.* ಕೃಷಿ ಭೂಮಿಯ ದುರುಪಯೋಗ ಮತ್ತು ಅಕ್ರಮ ನಿರ್ಮಾಣದ ವಿರುದ್ಧ ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ತಕ್ಷಣವೇ ‘ಬುಲ್ಡೋಜರ್’ ಅಸ್ತ್ರ ಬಳಸುತ್ತಾರೆಯೇ ಎಂದು ಕಾದು ನೋಡಬೇಕಿದೆ.
ವರದಿ: ಕಿರಣ್ ಚಂದ್ರಹಾಸ್ ಗಾಂವಕರ್, ಅಂಕೋಲಾ



