ಉಪಯುಕ್ತ ಮಾಹಿತಿಗಳುಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ನೆಹರೂ ಕ್ರೀಡಾಂಗಣದಲ್ಲಿ ಮಾನವೀಯತೆಗೆ ಗೌರವ: ಅಪಘಾತ ಹಾಗೂ ಅನಾರೋಗ್ಯಕ್ಕೆ ಬಲಿಯಾದ ಮಕ್ಕಳ ಅಂಗಾಂಗ ದಾನ ಮಾಡಿದ ಪೋಷಕರಿಗೆ ಶ್ಲಾಘನೆ

Share News

ಶಿವಮೊಗ್ಗ : ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ, ಸಮಾಜಕ್ಕೆ ಮಾನವೀಯ ಮೌಲ್ಯಗಳ ಅತ್ಯುನ್ನತ ಸಂದೇಶ ನೀಡಿದ ಎರಡು ಕುಟುಂಬಗಳಿಗೆ ಕರ್ನಾಟಕ ಸರ್ಕಾರದ ವತಿಯಿಂದ ಪ್ರಶಂಸನೀಯ ಪತ್ರ ನೀಡಿ ಗೌರವಿಸಲಾಯಿತು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪನವರು ಈ ಸನ್ಮಾನ ನೆರವೇರಿಸಿದರು.

​ಅಕಾಲಿಕವಾಗಿ ತಮ್ಮ ಮಕ್ಕಳನ್ನು ಕಳೆದುಕೊಂಡ ತೀವ್ರ ದುಃಖ ಹಾಗೂ ಆಕ್ರಂದನದ ನಡುವೆಯೂ ಅಂಗಾಂಗ ದಾನದಂತಹ ಉದಾತ್ತ ನಿರ್ಧಾರ ತಳೆದು, ಹಲವರ ಜೀವ ಉಳಿಸಿ ಇತರರ ಕತ್ತಲೆಯ ಬದುಕಿಗೆ ಬೆಳಕಾದ ಪೋಷಕರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.

​೧೬ ವರ್ಷದ ಗಿರೀಶ್ (ಶಿರಾಳಕೊಪ್ಪ):

ಶಿರಾಳಕೊಪ್ಪ ಪಟ್ಟಣದ ನಿವಾಸಿಗಳಾದ ಶ್ರೀಮತಿ ರೂಪ ಮತ್ತು ಶ್ರೀ ಕುಮಾರ್ ದಂಪತಿಗಳ ೧೬ ವರ್ಷದ ಸುಪುತ್ರ ಕು. ಗಿರೀಶ್ ರಸ್ತೆ ಅಪಘಾತಕ್ಕೆ ಈಡಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮಗನ ಅಗಲಿಕೆಯ ತೀವ್ರ ನೋವಿನಲ್ಲೂ ಪೋಷಕರು ಅಂಗಾಂಗ ದಾನಕ್ಕೆ ಮುಂದಾದರು. ಗಿರೀಶ್ ಅವರ ದೇಹದಿಂದ ಪಡೆದ ಲಿವರ್, ಎಡ ಮತ್ತು ಬಲ ಭಾಗದ ಮೂತ್ರಕೋಶಗಳು ಹಾಗೂ ಹೃದಯದ ಕವಾಟಗಳನ್ನು ಜೀವದ ಉಳಿವಿಗಾಗಿ ಹೋರಾಡುತ್ತಿದ್ದ ನಾಲ್ಕು ಜನರಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ.

​ಕು. ಕೀರ್ತನ (ಭದ್ರಾವತಿ):

ಭದ್ರಾವತಿಯ ಶ್ರೀಮತಿ ನೀಲಮ್ಮ ಮತ್ತು ಶ್ರೀ ಕುಮಾರ್ ದಂಪತಿಗಳ ಪುತ್ರಿ ಕು. ಕೀರ್ತನ ಹಠಾತ್ ಸಂಭವಿಸಿದ ಆರೋಗ್ಯ ವೈಪರೀತ್ಯದಿಂದಾಗಿ ಅಕಾಲಿಕ ಮರಣ ಹೊಂದಿದ್ದರು. ಮಗಳನ್ನು ಕಳೆದುಕೊಂಡ ಅಸಹನೀಯ ದುಃಖದಲ್ಲೂ ಈ ಪೋಷಕರು ಅಂಗಾಂಗ ದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾದರು. ಕೀರ್ತನ ಅವರ ದೇಹದಿಂದ ಪಡೆದ ಲಿವರ್, ಎರಡೂ ಮೂತ್ರಕೋಶಗಳು ಹಾಗೂ ಹೃದಯದ ಕವಾಟಗಳನ್ನು ಯಶಸ್ವಿಯಾಗಿ ಕಸಿ ಮಾಡಿ ಮತ್ತೂ ನಾಲ್ಕು ಜನರ ಜೀವ ಉಳಿಸಲಾಗಿದೆ.

​ಸಾರ್ಥಕ ಬದುಕು – ಸಮಾಜಕ್ಕೆ ಮಾದರಿ

ತಮ್ಮ ಮಕ್ಕಳ ಹುಟ್ಟು ಮತ್ತು ಸಾವು ಎರಡನ್ನೂ ಸಾರ್ಥಕಗೊಳಿಸಿ, ಒಟ್ಟು ಎಂಟು ಜೀವಗಳಿಗೆ ಹೊಸ ಆಶಾಕಿರಣವಾದ ಎರಡೂ ಕುಟುಂಬಗಳ ಈ ಶ್ಲಾಘನೀಯ ಕಾರ್ಯವನ್ನು ಗುರುತಿಸಿ ಜಿಲ್ಲಾಡಳಿತ ಹಾಗೂ ಸರ್ಕಾರವು ಸ್ವಾತಂತ್ರ್ಯ ದಿನಾಚರಣೆಯ ಸುದಿನದಂದು ಪ್ರಶಂಸನೀಯ ಪತ್ರ ನೀಡಿ ಗೌರವಿಸಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!