ರಸಗೊಬ್ಬರ ಖರೀದಿಗೆ ರೈತರಿಗೆ ಎಫ್‍ಐಡಿ (FID) ಕಡ್ಡಾಯ: ಕೃಷಿ ಇಲಾಖೆ ಆದೇಶ

ಮಡಿಕೇರಿ: ರಸಗೊಬ್ಬರ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮತ್ತು ಕಾಳಸಂತೆಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ರೈತರು ರಸಗೊಬ್ಬರ ಖರೀದಿಸಲು ಕಡ್ಡಾಯವಾಗಿ ಎಫ್‍ಐಡಿ (Farmer ID) ಹೊಂದಿರಬೇಕು ಹಾಗೂ ಅದನ್ನು ತಮ್ಮ ಭೂಮಿಯ ದಾಖಲೆಗಳೊಂದಿಗೆ ಜೋಡಿಸಿರಬೇಕು.
ಕೆ-ಕಿಸಾನ್ ತಂತ್ರಜ್ಞಾನ: ರೈತರ ಭೂಮಿ ಮತ್ತು ಬೆಳೆಯ ವಿವರಗಳ ಆಧಾರದ ಮೇಲೆ ಎಷ್ಟು ಪ್ರಮಾಣದ ರಸಗೊಬ್ಬರ ಅಗತ್ಯವಿದೆಯೋ ಅಷ್ಟನ್ನು ಮಾತ್ರ ಕೆ-ಕಿಸಾನ್ ತಂತ್ರಾಂಶದ ಮೂಲಕ ವಿತರಿಸಲಾಗುತ್ತದೆ.
ಕಾಳಸಂತೆಗೆ ಬ್ರೇಕ್: ರೈತರ ಹೆಸರಿನಲ್ಲಿ ಗೊಬ್ಬರ ಖರೀದಿಸಿ ಅಕ್ರಮವಾಗಿ ಮಾರಾಟ ಮಾಡುವ ದಂಧೆಯನ್ನು ತಡೆಯುವುದು ಮತ್ತು ಗೊಬ್ಬರದ ಮಿತವ್ಯಯ ಬಳಕೆಯನ್ನು ಉತ್ತೇಜಿಸುವುದು ಈ ನಿಯಮದ ಮುಖ್ಯ ಉದ್ದೇಶ.
ದಾಖಲೆಗಳ ಸಲ್ಲಿಕೆ: ಎಫ್‍ಐಡಿ ಹೊಂದಿರದ ರೈತರು ಆಧಾರ್ ಕಾರ್ಡ್ ಹಾಗೂ ಪಹಣಿ (RTC) ದಾಖಲೆಗಳೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ಹೊಸದಾಗಿ ಎಫ್‍ಐಡಿ ಸೃಜಿಸಿಕೊಳ್ಳಲು ಸೂಚಿಸಲಾಗಿದೆ.
ವಿಶೇಷ ನಿಗಾ: ಜಾಗತಿಕ ಯುದ್ಧದ ಹಿನ್ನೆಲೆಯಲ್ಲಿ ರಸಗೊಬ್ಬರ ತಯಾರಿಕೆಗೆ ಬೇಕಾದ ಕಚ್ಚಾ ಸಾಮಗ್ರಿಗಳ ಆಮದಿನಲ್ಲಿ ವ್ಯತ್ಯಯವಾಗಿರುವ ಕಾರಣ, ಲಭ್ಯವಿರುವ ರಸಗೊಬ್ಬರವನ್ನು ಅರ್ಹ ರೈತರಿಗೆ ತಲುಪಿಸಲು ಪ್ರತ್ಯೇಕ ಸಾಫ್ಟ್‌ವೇರ್ ಮೂಲಕ ನಿಗಾ ಇರಿಸಲಾಗುತ್ತಿದೆ.
ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಎಫ್‍ಐಡಿ ನಮೂದಿಸಿ ಕೆ-ಕಿಸಾನ್ ತಂತ್ರಾಂಶದ ಮೂಲಕವೇ ಮಾರಾಟ ಮಾಡಬೇಕು. ನಿಗದಿತ ದರಕ್ಕಿಂತ (MRP) ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಪರವಾನಗಿ ರದ್ದು ಮಾಡಲಾಗುವುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ ಅವರು ಎಚ್ಚರಿಕೆ ನೀಡಿದ್ದಾರೆ.



