ನೀಟ್ನಲ್ಲಿ ಎಚ್.ಡಿ. ಕೋಟೆಯ ವಿದ್ಯಾರ್ಥಿನಿಗೆ ದೇಶಕ್ಕೇ 12ನೇ ರ್ಯಾಂಕ್: ಗ್ರಾಮೀಣ ಪ್ರತಿಭೆಗೆ ಶಾಸಕ ಅನಿಲ್ ಚಿಕ್ಕಮಾದು ಅಭಿನಂದನೆ

ಎಚ್.ಡಿ. ಕೋಟೆ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯೊಬ್ಬರು ರಾಷ್ಟ್ರೀಯ ಮಟ್ಟದ ವೈದ್ಯಕೀಯ ಪ್ರವೇಶ ಪರೀಕ್ಷೆ (NEET-2026)ಯಲ್ಲಿ ದೇಶಕ್ಕೇ 12ನೇ ರ್ಯಾಂಕ್ ಗಳಿಸುವ ಮೂಲಕ ಅಪರೂಪದ ಸಾಧನೆ ಮಾಡಿದ್ದು, ಎಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಅಭೂತಪೂರ್ವ ಕೀರ್ತಿ ತಂದಿದ್ದಾರೆ.
ಸರಗೂರು ತಾಲೂಕು ವ್ಯಾಪ್ತಿಯ ಕಂದಲಿಕೆಯ ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯ ಹಳೆಯ ವಿದ್ಯಾರ್ಥಿನಿ ಹಾಗೂ ನೆಮ್ಮನಹಳ್ಳಿ ಗ್ರಾಮದ ಪ್ರತಿಭಾವಂತೆಯಾದ ಈಕೆ ದೇಶದ ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಈ ಮಹೋನ್ನತ ಸಾಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವಿದ್ಯಾರ್ಥಿನಿಯು 5ನೇ ತರಗತಿಯಿಂದ 10ನೇ ತರಗತಿವರೆಗೆ ಕಂದಲಿಕೆಯ ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದರು. ಗ್ರಾಮೀಣ ಹಿನ್ನೆಲೆಯ ಹಾಗೂ ಕಡು ಬಡತನದ ಸವಾಲುಗಳಿದ್ದರೂ, ದೃಢ ಸಂಕಲ್ಪದೊಂದಿಗೆ ಅಭ್ಯಾಸ ಮುಂದುವರಿಸಿ ಈ ಯಶಸ್ಸು ಗಳಿಸಿದ್ದಾರೆ. ಇವರ ಸಾಧನೆಯು “ಕಠಿಣ ಪರಿಶ್ರಮವಿದ್ದರೆ ಯಾವುದೇ ಗುರಿ ಅಸಾಧ್ಯವಲ್ಲ” ಎಂಬುದನ್ನು ಸಾಬೀತುಪಡಿಸಿದ್ದು, ಗ್ರಾಮೀಣ ಭಾಗದ ಇತರೆ ವಿದ್ಯಾರ್ಥಿಗಳಿಗೆ ಹೊಸ ದಿಕ್ಸೂಚಿಯಾಗಿದೆ.
ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಅಭಿನಂದಿಸಿದ ಎಚ್.ಡಿ. ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಅವರು,
”ಗ್ರಾಮೀಣ ಭಾಗದ, ಅದರಲ್ಲೂ ಸರ್ಕಾರಿ ವಸತಿ ಶಾಲೆಯ ಹಿನ್ನೆಲೆಯ ವಿದ್ಯಾರ್ಥಿನಿಯೊಬ್ಬರು ರಾಷ್ಟ್ರೀಯ ಮಟ್ಟದಲ್ಲಿ ಇಂತಹ ಐತಿಹಾಸಿಕ ಸಾಧನೆ ಮಾಡಿರುವುದು ಇಡೀ ಕ್ಷೇತ್ರಕ್ಕೇ ಹೆಮ್ಮೆಯ ವಿಷಯ. ಅವರ ಮುಂದಿನ ವೈದ್ಯಕೀಯ ಶಿಕ್ಷಣಕ್ಕೆ ನಮ್ಮ ಸಂಪೂರ್ಣ ಬೆಂಬಲವಿರಲಿದೆ. ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರ ಹಾಗೂ ಸಮಾಜದಿಂದ ಸದಾ ಪ್ರೋತ್ಸಾಹ ಸಿಗಬೇಕು,” ಎಂದು ಶುಭ ಹಾರೈಸಿದರು.
ವಿದ್ಯಾರ್ಥಿನಿಯ ಈ ಭರ್ಜರಿ ಸಾಧನೆಗೆ ಶಾಲೆಯ ಶಿಕ್ಷಕರು, ಸಿಬ್ಬಂದಿ, ಪೋಷಕರು ಹಾಗೂ ಸಾರ್ವಜನಿಕರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಶಾಲೆಯ ಗುಣಮಟ್ಟದ ಶಿಕ್ಷಣ, ಶಿಕ್ಷಕರ ನಿರಂತರ ಮಾರ್ಗದರ್ಶನ ಹಾಗೂ ವಿದ್ಯಾರ್ಥಿನಿಯ ಶ್ರಮವೇ ಈ ಯಶಸ್ಸಿಗೆ ಕಾರಣ ಎಂದು ಶಾಲಾ ಆಡಳಿತ ಮಂಡಳಿ ಹೆಮ್ಮೆಯಿಂದ ಹೇಳಿಕೊಂಡಿದೆ. ಮುಂದಿನ ದಿನಗಳಲ್ಲಿ ಈಕೆ ಉತ್ತಮ ವೈದ್ಯೆಯಾಗಿ ಸಮಾಜಸೇವೆ ಮಾಡಲಿ ಎಂದು ಸ್ಥಳೀಯ ಮುಖಂಡರು ಹಾಗೂ ಶಿಕ್ಷಣ ಪ್ರೇಮಿಗಳು ಹಾರೈಸಿದ್ದಾರೆ.



