ಕೆ.ಜಿ.ಎಫ್: ಗೂಂಡಾ ಕಾಯ್ದೆಯಡಿ ಕುಖ್ಯಾತ ರೌಡಿಶೀಟರ್ ಅಭಿಸಿರಿಲ್ ಬಂಧನ — ಕಲಬುರಗಿ ಜೈಲಿಗೆ ರವಾನೆ

ಕೆ.ಜಿ.ಎಫ್ (ಸೆ. 05): ನಿರಂತರ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ಆಂಡ್ರಸನ್ ಪೇಟೆ ಠಾಣೆ ವ್ಯಾಪ್ತಿಯ ಕುಖ್ಯಾತ ರೌಡಿ ಆಸಾಮಿ ಅಭಿಸಿರಿಲ್ @ ಅಭಿ @ ಅಜ್ಜ (19) ಎಂಬಾತನನ್ನು ಗೂಂಡಾ ಕಾಯ್ದೆಯಡಿ (Goonda Act) ಬಂಧಿಸಿ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಹಲವು ಕೃತ್ಯಗಳಲ್ಲಿ ಭಾಗಿ:
ಮಸ್ಕಂ ಇ ಬ್ಲಾಕ್ನ ನಿವಾಸಿಯಾದ ಈತನ ವಿರುದ್ಧ ಆಂಡ್ರಸನ್ ಪೇಟೆ ಸೇರಿದಂತೆ ವಿವಿಧ ಠಾಣೆಗಳಲ್ಲಿ 3 ಕೊಲೆ ಯತ್ನ, 1 ಅಪಹರಣ, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಗಡಿಪಾರು ಉಲ್ಲಂಘನೆ ಸೇರಿದಂತೆ ಒಟ್ಟು 7 ಗಂಭೀರ ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಆತನನ್ನು ಗಡಿಪಾರು ಮಾಡಲಾಗಿದ್ದರೂ, ಆದೇಶ ಉಲ್ಲಂಘಿಸಿ ಬಂಗಾರಪೇಟೆಯ ಪೆಟ್ರೋಲ್ ಬಂಕ್ ಬಳಿ ಕೊಲೆಗೆ ಯತ್ನಿಸಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದ. ಅಲ್ಲದೆ, ನ್ಯಾಯಾಲಯದಿಂದ ಜಾಮೀನು ಪಡೆದು ಪುನಃ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ.
ಗೂಂಡಾ ಕಾಯ್ದೆಯಡಿ ಕಠಿಣ ಕ್ರಮ:
ಸದರಿ ರೌಡಿಯ ಪುಂಡಾಟಿಕೆಗೆ ಬ್ರೇಕ್ ಹಾಕಲು ಆಂಡ್ರಸನ್ ಪೇಟೆ ಪಿ.ಎಸ್.ಐ ಹೊನ್ನೆಗೌಡ ಪಿ.ಎಂ. ಅವರು ನೀಡಿದ ಪ್ರಸ್ತಾವನೆಯನ್ನು ಪುರಸ್ಕರಿಸಿದ ಕೋಲಾರ ಜಿಲ್ಲಾಧಿಕಾರಿಗಳು, ಸೆ. 04 ರಂದು ಗೂಂಡಾ ಕಾಯ್ದೆಯಡಿ ಬಂಧನಕ್ಕೆ ಆದೇಶ ಹೊರಡಿಸಿದ್ದರು. ಅದರಂತೆ ಸೆ. 05 ರಂದು ಪೊಲೀಸರು ಆರೋಪಿಯನ್ನು ಬಂಧಿಸಿ ಕಲಬುರಗಿ ಜೈಲಿಗೆ ಒಪ್ಪಿಸಿದ್ದಾರೆ.
ಡಿವೈಎಸ್ಪಿ ವಿ. ಲಕ್ಷ್ಮಯ್ಯ ಹಾಗೂ ವೃತ್ತ ನಿರೀಕ್ಷಕ ಅನಿಲ್ ಕುಮಾರ್ ಮಾರ್ಗದರ್ಶನದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ ಪಿ.ಎಸ್.ಐ ಹೊನ್ನೆಗೌಡ ಹಾಗೂ ಸಿಬ್ಬಂದಿಯ ಕಾರ್ಯವನ್ನು ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಶ್ಲಾಘಿಸಿದ್ದಾರೆ.



