ಸುಮಂತ್ ನಿಗೂಢ ಸಾವು ಪ್ರಕರಣ: ಸತ್ಯ ಬಯಲಿಗೆಳೆಯಲು ಕುಟುಂಬಸ್ಥರ ಬ್ರೈನ್ ಮ್ಯಾಪಿಂಗ್, ಮಂಪರು ಪರೀಕ್ಷೆ

ಬೆಳ್ತಂಗಡಿ: ಬೆಳ್ತಂಗಡಿ ತಾಲ್ಲೂಕಿನ ಕುವೆಟ್ಟು ಗ್ರಾಮದ ಗೇರುಕಟ್ಟೆ ಸಮೀಪದ ಸಂಭೋಳ್ಯದ ಬಾಲಕ ಸುಮಂತ್ (15) ಅವರ ಸಂಶಯಾಸ್ಪದ ಸಾವಿನ ಪ್ರಕರಣದ ನಿಗೂಢತೆ ಭೇದಿಸಲು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ನ್ಯಾಯಾಲಯದ ಪೂರ್ವಾನುಮತಿ ಪಡೆದು ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (FSL) ಕುಟುಂಬಸ್ಥರ ಬ್ರೈನ್ ಮ್ಯಾಪಿಂಗ್ ಹಾಗೂ ಮಂಪರು ಪರೀಕ್ಷೆ ಪ್ರಕ್ರಿಯೆ ಆರಂಭಿಸಲಾಗಿದೆ.
ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬದ ಐವರನ್ನು ಈಗಾಗಲೇ ಬೆಂಗಳೂರಿನ ಎಫ್ಎಸ್ಎಲ್ಗೆ ಕರೆದೊಯ್ದು ಮೊದಲ ಹಂತದ ಪರೀಕ್ಷೆ ನಡೆಸಲಾಗಿದೆ.
ವಿಚಾರಣೆಗೊಳಪಟ್ಟ ಕುಟುಂಬಸ್ಥರ ವಿವರ:
ಆಗಸ್ಟ್ 10: ಮೃತ ಬಾಲಕನ ತಂದೆ ಸುಬ್ರಹ್ಮಣ್ಯ ನಾಯಕ್ ಹಾಗೂ ತಾಯಿ ರತ್ನಾವತಿ ಅವರನ್ನು ಬೆಳಗಿನಿಂದ ಮಧ್ಯಾಹ್ನದವರೆಗೆ ತೀವ್ರ ವಿಚಾರಣೆಗೆ ಒಳಪಡಿಸಲಾಯಿತು. ಬಳಿಕ ನಿಟ್ಟೆ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯಾಗಿರುವ ಸುಮಂತ್ ಸಹೋದರ ಸುದರ್ಶನ್ ಅವರನ್ನು ವಿಚಾರಣೆ ನಡೆಸಲಾಯಿತು.
ಆಗಸ್ಟ್ 11: ಪೆರ್ಲದಲ್ಲಿ ಅರ್ಚಕರಾಗಿರುವ ರತ್ನಾವತಿ ಅವರ ಸಹೋದರ ರಾಧಾಕೃಷ್ಣ ಹಾಗೂ ಕಾಸರಗೋಡಿನ ಸಂಬಂಧಿ, ಅಡುಗೆ ವೃತ್ತಿಯ ಲಕ್ಷ್ಮೀನಾರಾಯಣ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.
ಈ ಐವರಿಂದ ಪಡೆದ ಉತ್ತರಗಳು ಹಾಗೂ ಮಾಹಿತಿಯನ್ನು ಎಫ್ಎಸ್ಎಲ್ ತಜ್ಞರು ತಾಳೆಹಾಕಿ ಪರಿಶೀಲಿಸುತ್ತಿದ್ದಾರೆ. ಮುಂದಿನ ಹಂತದ ಪರೀಕ್ಷೆಗೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದ್ದು, ಕುಟುಂಬಸ್ಥರ ಪ್ರಕ್ರಿಯೆ ಮುಗಿದ ಬಳಿಕ ಇತರ ಶಂಕಿತರ ಮೇಲೂ ಬ್ರೈನ್ ಮ್ಯಾಪಿಂಗ್ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
6 ತಿಂಗಳ ಬಳಿಕವೂ ಬಗೆಹರಿಯದ ನಿಗೂಢತೆ:
ಗೇರುಕಟ್ಟೆ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿಯಾಗಿದ್ದ ಸುಮಂತ್, 2026ರ ಜನವರಿ 14ರಂದು ಮುಂಜಾನೆ ನಾಳಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಧನುಪೂಜೆಗೆ ತೆರಳಿದ್ದಾಗ ನಿಗೂಢವಾಗಿ ಸಾವನ್ನಪ್ಪಿದ್ದ. ಇದು ಸಹಜ ಸಾವಲ್ಲ, ವ್ಯವಸ್ಥಿತ ಹತ್ಯೆ ಎಂಬ ಅನುಮಾನಗಳು ಕೇಳಿಬಂದಿದ್ದವು. ವಿಶೇಷ ಪೊಲೀಸ್ ಪಡೆ ರಚಿಸಿ ತನಿಖೆ ನಡೆಸಿದರೂ ಇದುವರೆಗೆ ಸ್ಪಷ್ಟ ಸುಳಿವು ಸಿಗದ ಹಿನ್ನೆಲೆಯಲ್ಲಿ, ಇದೀಗ ವೈಜ್ಞಾನಿಕ ಪರೀಕ್ಷೆಗಳ ಮೂಲಕ ಸತ್ಯಾಸತ್ಯತೆ ಹೊರತರಲು ಪೊಲೀಸರು ಮುಂದಾಗಿದ್ದಾರೆ.



