ತುಂಗಭದ್ರಾ ನದಿಗೆ ಜೀವಕಳೆ: ರೈತರಲ್ಲಿ ಹೆಚ್ಚಿದ ಆಶಾಭಾವ — ಚೌಡಯ್ಯನದಾಪುರದ ಅಂಬಿಗರ ಚೌಡಯ್ಯ ಐಕ್ಯ ಮಂಟಪ ಜಲಾವೃತ

ರಾಣೇಬೆನ್ನೂರು: ಮಲೆನಾಡು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಂಗಭದ್ರಾ ನದಿಗೆ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗಿದ್ದು, ನದಿ ಮೈದುಂಬಿ ಹರಿಯುತ್ತಿದೆ. ತಾಲೂಕಿನ ನದಿ ಪಾತ್ರದಲ್ಲಿ ನೀರಿನ ಮಟ್ಟ ಏರಿಕೆಯಾಗಿರುವುದು ಕೃಷಿಕರಲ್ಲಿ ಹೊಸ ಭರವಸೆ ಮೂಡಿಸಿದ್ದು, ಮುಖದಲ್ಲಿ ಮಂದಹಾಸ ಮೂಡಿಸಿದೆ.
ಮಳೆ ಅಭಾವ ಹಾಗೂ ನೀರಿನ ಕೊರತೆಯಿಂದ ಆತಂಕದಲ್ಲಿದ್ದ ತಾಲೂಕಿನ ನದಿ ಪಾತ್ರದ ಗ್ರಾಮಗಳ ರೈತರಿಗೆ ನದಿಯ ನೀರಿನ ಹರಿವು ಹೆಚ್ಚಿರುವುದು ನೆಮ್ಮದಿ ತಂದಿದೆ. ಕೃಷಿಗೆ ಪ್ರಮುಖವಾಗಿ ತುಂಗಭದ್ರಾ ನದಿಯನ್ನೇ ಅವಲಂಬಿಸಿರುವ ರೈತರು, ಇದೀಗ ಬೆಳೆಗಳು ಚೇತರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.
ಬೆಳೆಗಳಿಗೆ ಆಸರೆಯಾಗಲಿರುವ ನದಿ ನೀರು:
ತಾಲೂಕಿನ ನದಿ ಪಾತ್ರ ಹಾಗೂ ನೀರಾವರಿ ಪ್ರದೇಶಗಳಲ್ಲಿ ಪ್ರಮುಖವಾಗಿ ಭತ್ತ, ಕಬ್ಬು, ಮೆಕ್ಕೆಜೋಳ ಮತ್ತು ಎಲೆಬಳ್ಳಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತದೆ. ಮಳೆಯ ಕೊರತೆಯಿಂದ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿತ್ತು. ವಿಶೇಷವಾಗಿ ನಿರಂತರ ನೀರಿನ ಅಗತ್ಯವಿರುವ ಭತ್ತದ ಬೆಳೆಗೆ ನದಿಯ ನೀರಿನ ಲಭ್ಯತೆ ವರದಾನವಾಗಲಿದೆ. ಮುಂದಿನ ದಿನಗಳಲ್ಲೂ ಉತ್ತಮ ಮಳೆಯಾಗಿ ನದಿಗೆ ಸಮರ್ಪಕ ನೀರು ಹರಿದುಬಂದರೆ ನೀರಾವರಿ ಪ್ರದೇಶದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಐಕ್ಯ ಮಂಟಪ ಜಲಾವೃತ — ಮುನ್ನೆಚ್ಚರಿಕೆಗೆ ಮನವಿ:
ನದಿಯಲ್ಲಿ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ತಾಲೂಕಿನ ಚೌಡಯ್ಯನದಾಪುರ ಸಮೀಪ ತುಂಗಭದ್ರಾ ನದಿ ತೀರದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಮಂಟಪದ ಸುತ್ತಲೂ ನೀರು ಆವರಿಸಿರುವ ದೃಶ್ಯ ಸ್ಥಳೀಯರ ಹಾಗೂ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ನದಿಯಲ್ಲಿ ನೀರಾವರಿ ಹರಿವು ಹೆಚ್ಚಿರುವುದರಿಂದ ನದಿ ಪಾತ್ರದ ಸಾರ್ವಜನಿಕರು, ಪ್ರವಾಸಿಗರು ತೀವ್ರ ಮುನ್ನೆಚ್ಚರಿಕೆ ವಹಿಸಬೇಕು. ನೀರಿನ ಮಟ್ಟ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಯಾರೂ ನದಿಗೆ ಇಳಿಯುವುದು, ಈಜಾಡುವುದು ಹಾಗೂ ಅಪಾಯಕಾರಿ ಸ್ಥಳಗಳಿಗೆ ತೆರಳಬಾರದು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.



