ರಹದಾರಿ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ರೂ. 1.70 ಲಕ್ಷ ಮೌಲ್ಯದ ಮರದ ದಿಮ್ಮಿಗಳು ಜಪ್ತಿ; ಆರು ಆರೋಪಿಗಳ ಬಂಧನ

ಮೂಡಿಗೆರೆ: ತಾಲೂಕಿನ ಪ್ರಾದೇಶಿಕ ಅರಣ್ಯ ವಲಯದ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಭರ್ಜರಿ ಜಂಟಿ ಕಾರ್ಯಾಚರಣೆ ನಡೆಸಿದ್ದು, ಯಾವುದೇ ರಹದಾರಿ (ಪರ್ಮಿಟ್) ಇಲ್ಲದೆ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಮರದ ದಿಮ್ಮಿಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಸಾಗಾಟಕ್ಕೆ ಬಳಸಿದ್ದ ಲಾರಿಯನ್ನು ಜಪ್ತಿ ಮಾಡಲಾಗಿದೆ.
ದಿನಾಂಕ 12ರ ಮುಂಜಾನೆ ಸುಮಾರು 12:30ರ ಮಧ್ಯರಾತ್ರಿಯ ಹೊತ್ತಿಗೆ ಮೂಡಿಗೆರೆ ಪ್ರಾದೇಶಿಕ ಅರಣ್ಯ ವಲಯ ಕಸಬಾ ಹೋಬಳಿಯ ಹಂದುಗುಳಿ ಗ್ರಾಮದಿಂದ ಹಾಲೂರು ಗ್ರಾಮಕ್ಕೆ ಹೋಗುವ ರಸ್ತೆ ಬದಿಯಲ್ಲಿ ಲಾರಿಯೊಂದರಲ್ಲಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಅರಣ್ಯ ಇಲಾಖೆಗೆ ಲಭ್ಯವಾಗಿತ್ತು.
ಮಾಹಿತಿ ಸಿಗುತ್ತಿದ್ದಂತೆ ವಲಯ ಅರಣ್ಯಾಧಿಕಾರಿಗಳ ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿ ತಪಾಸಣೆ ನಡೆಸಿತು. ಈ ವೇಳೆ ಟಾರ್ಪಾಲಿನಿಂದ ಮುಚ್ಚಲಾಗಿದ್ದ ಲಾರಿಯನ್ನು ಪರಿಶೀಲಿಸಿದಾಗ, ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಅಂದಾಜು 1,70,000/- ರೂ. ಮೌಲ್ಯದ 16.000 ಘನ ಮೀಟರ್ ಗಾತ್ರದ ಕಾಡುಜಾತಿ ಮರದ ಬಿಲೆಟ್ಸ್ ತುಂಡುಗಳು ಪತ್ತೆಯಾಗಿವೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಮರದ ದಿಮ್ಮಿಗಳು ಹಾಗೂ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಅಕ್ರಮ ಮರ ಸಾಗಾಟ ದಂಧೆಯಲ್ಲಿ ತೊಡಗಿದ್ದ ಆರು ಮಂದಿ ಆರೋಪಿಗಳನ್ನು ಅರಣ್ಯ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತರನ್ನು:
ರಂಗರಾಜು ಬಿನ್ ರಾಮರಾಜು (46 ವರ್ಷ)
ಶಿವಪ್ಪ ಬಿನ್ ಗೋವಿಂದಯ್ಯ (49 ವರ್ಷ)
ಪ್ರಕಾಶ ಬಿನ್ ಗುರುವ ಪೂಜಾರಿ (53 ವರ್ಷ)
ಚಂದ್ರಶೇಖರ್ ಬಿನ್ ಕೃಷ್ಣಮೂರ್ತಿ (32 ವರ್ಷ)
ರಫಿ ಬಿನ್ ಲೇಟ್ ಕಾಳಯ್ಯ (40 ವರ್ಷ)
ಚಂದ್ರಶೇಖರ್ ಬಿನ್ ಮೊಗಣ್ಣ (70 ವರ್ಷ)
ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳ ವಿರುದ್ಧ ಮೂಡಿಗೆರೆ ಅರಣ್ಯ ವಲಯದಲ್ಲಿ ಅರಣ್ಯ ಮೊಕದ್ದಮೆ ಸಂಖ್ಯೆ: 18/2026-27 ರ ಅಡಿಯಲ್ಲಿ ಕಾನೂನುಬದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಈ ಯಶಸ್ವಿ ದಾಳಿ ಕಾರ್ಯಾಚರಣೆಯನ್ನು ಚಿಕ್ಕಮಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಶ್ರೀ ಕೆ.ಟಿ. ಬೋರಯ್ಯ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಶ್ರೀ ಆಕಾಶ್ ಟಿ.ಎಮ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ನಡೆಸಲಾಗಿದೆ. ಮೂಡಿಗೆರೆ ವಲಯ ಅರಣ್ಯಾಧಿಕಾರಿ (RFO) ಶ್ರೀ ಮಂಜುನಾಥ್ ಜಿ. ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ತಂಡ ಈ ಭರ್ಜರಿ ಬೇಟೆಯಾಡಿದೆ. ಅರಣ್ಯ ಸಂಪತ್ತಿನ ಲೂಟಿ ವಿರುದ್ಧ ಇಲಾಖೆಯ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



