ಯಲ್ಲಾಪುರ ಠಾಣೆಗೆ ನೂತನ ಪಿಐ ಆಗಿ ಸುರೇಶ ಕುಂಬಾರ್ ನೇಮಕ

ಯಲ್ಲಾಪುರ: ಯಲ್ಲಾಪುರ ಪೊಲೀಸ್ ಠಾಣೆಯ ನೂತನ ಪೊಲೀಸ್ ನಿರೀಕ್ಷಕರಾಗಿ (ಪಿಐ) ಸುರೇಶ ಜಿ. ಕುಂಬಾರ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.
ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಅವರು, ತಾಲೂಕಿನಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುವುದು. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಪೊಲೀಸರ ಗಮನಕ್ಕೆ ತರಬಹುದು ಎಂದು ತಿಳಿಸಿದರು.
ಇಲಾಖೆಯಲ್ಲಿ ಸುದೀರ್ಘ ಸೇವಾನುಭವ ಹೊಂದಿರುವ ಸುರೇಶ ಕುಂಬಾರ್ ಅವರು ಈ ಹಿಂದೆ ಹುಬ್ಬಳ್ಳಿ, ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ದಕ್ಷತೆ ಮತ್ತು ಜನಸ್ನೇಹಿ ಆಡಳಿತಕ್ಕೆ ಹೆಸರಾಗಿರುವ ಇವರ ಆಗಮನದಿಂದ ಯಲ್ಲಾಪುರ ಠಾಣೆಯ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆಯಿದೆ.
ಹಿಂದಿದ್ದ ಪಿಐ ರಮೇಶ ಹಾನಾಪುರ ಅವರು ಮುಂಡಗೋಡ ಠಾಣೆಗೆ ವರ್ಗಾವಣೆಯಾದ ನಂತರ ಕಳೆದ ಕೆಲವು ತಿಂಗಳಿಂದ ಈ ಹುದ್ದೆ ಖಾಲಿಯಿತ್ತು. ಇದೀಗ ನೂತನ ಪಿಐ ನೇಮಕವಾಗಿದ್ದು, ಅಪರಾಧ ತಡೆ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಅವರ ಮುಂದಿನ ಕಾರ್ಯವೈಖರಿಯತ್ತ ತಾಲೂಕಿನ ಜನರ ಗಮನ ನೆಟ್ಟಿದೆ.



