ಹಾರ್ಟ್ ಸೇಫ್ ತುಮಕೂರು’ ಅಭಿಯಾನಕ್ಕೆ ಚಾಲನೆ – ಆಕ್ಟೋಬರ್ 2ರವರೆಗೆ ಜಾಗೃತಿ ಜಾಥಾ, ತರಬೇತಿ

ತುಮಕೂರು: ತುಮಕೂರು ಹೊರವಲಯದ ಅಗಳಕೋಟೆಯಲ್ಲಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ ಸಿಪಿಆರ್ (CPR) ಕುರಿತು ಜಾಗೃತಿ ಮೂಡಿಸುವ ‘ಹಾರ್ಟ್ ಸೇಫ್ ತುಮಕೂರು’ (Heart Safe Tumakuru) ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ಅಭಿಯಾನವು ಆಕ್ಟೋಬರ್ 2ರವರೆಗೆ ನಡೆಯಲಿದ್ದು, ಸಾರ್ವಜನಿಕವಾಗಿ ಸಿಪಿಆರ್ ತರಬೇತಿ ಹಾಗೂ ಜಾಗೃತಿ ಜಾಥಾಗಳನ್ನು ಆಯೋಜಿಸುವ ಪ್ರಮುಖ ಉದ್ದೇಶವನ್ನು ಹೊಂದಿದೆ.
ಜೀವ ಉಳಿಸುವ ಸಿಪಿಆರ್ ಅರಿವು:
ಇತ್ತೀಚಿನ ದಿನಗಳಲ್ಲಿ ಸಡನ್ ಹಾರ್ಟ್ ಅಟ್ಯಾಕ್ ಹಾಗೂ ಹೃದಯಾಘಾತದಿಂದ ಮೃತಪಡುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅಂತಹ ತುರ್ತು ಸಂದರ್ಭಗಳಲ್ಲಿ ತಕ್ಷಣವೇ ಪ್ರಥಮ ಚಿಕಿತ್ಸೆಯಾಗಿ ಸಿಪಿಆರ್ ನೀಡುವುದರಿಂದ ಅಮೂಲ್ಯವಾದ ಜೀವವೊಂದನ್ನು ಉಳಿಸಲು ಸಾಧ್ಯವಿದೆ. ಈ ಕುರಿತು ಪ್ರತಿಯೊಬ್ಬ ಸಾರ್ವಜನಿಕರಲ್ಲೂ ಸೂಕ್ತ ಅರಿವು ಮೂಡಿಸುವುದೇ ಈ ಆಂದೋಲನದ ಮುಖ್ಯ ಗುರಿಯಾಗಿದೆ.
ಈ ಸಂದರ್ಭದಲ್ಲಿ ಕಾರ್ಡಿಯೋಥೊರಾಸಿಕ್ ಶಸ್ತ್ರಚಿಕಿತ್ಸಕರಾದ ಡಾ. ತಮೀಮ್ ಅಹ್ಮದ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಅಶ್ವಿಜಾ, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ, ಕಾಲೇಜಿನ ಪ್ರಾಂಶುಪಾಲರಾದ ಮಲ್ಲಿಕಾರ್ಜುನ ಸಾಣೆಕೊಪ್ಪ ಸೇರಿದಂತೆ ಹಲವು ಗಣ್ಯರು ಹಾಗೂ ವೈದ್ಯರು ಉಪಸ್ಥಿತರಿದ್ದರು.



