ರಾಜ್ಯ ಸುದ್ದಿಸ್ಥಳೀಯ ಸುದ್ದಿಗಳು

ನಂಜನಗೂಡು ಸರ್ಕಾರಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಎಂ. ಮಹದೇವಸ್ವಾಮಿ ಈಗ ನ್ಯಾಯಾಧೀಶರು: ಕಾಲೇಜಿಗೆ ಹೆಮ್ಮೆಯ ಕ್ಷಣ

Share News

ನಂಜನಗೂಡು: ಸ್ಥಳೀಯ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ, ಉಪ್ಪನಹಳ್ಳಿ ಗ್ರಾಮದ ನಿವಾಸಿ ಎಂ. ಮಹದೇವಸ್ವಾಮಿ ಅವರು ಕರ್ನಾಟಕ ನ್ಯಾಯಾಂಗ ಸೇವಾ ಆಯೋಗ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಈ ಸಾಧನೆಯು ಕಾಲೇಜಿಗೆ ಮತ್ತು ತಾಲ್ಲೂಕಿಗೆ ಅಪಾರ ಹೆಮ್ಮೆ ತಂದಿದೆ.

ನ್ಯಾಯಾಧೀಶರಾಗಿ ನೇಮಕಗೊಂಡ ಎಂ. ಮಹದೇವಸ್ವಾಮಿ ಅವರನ್ನು ನಂಜನಗೂಡು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ವತಿಯಿಂದ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹದೇವಸ್ವಾಮಿ ಅವರು ತಮ್ಮ ವಿದ್ಯಾರ್ಥಿ ಜೀವನದ ದಿನಗಳನ್ನು ಮೆಲುಕು ಹಾಕಿದರು. “ನಾನು ಇಂದು ಈ ಉನ್ನತ ಮಟ್ಟಕ್ಕೆ ಬೆಳೆಯಲು ನನ್ನ ಕಾಲೇಜಿನ ಉಪನ್ಯಾಸಕರ ಬೋಧನೆ ಮತ್ತು ಅವರು ನೀಡಿದ ಮಾರ್ಗದರ್ಶನವೇ ಮುಖ್ಯ ಕಾರಣ. ಅವರ ಪ್ರತಿಯೊಂದು ಸಲಹೆಯೂ ನನ್ನ ಯಶಸ್ಸಿನ ಹಿಂದಿನ ಶಕ್ತಿಯಾಗಿದೆ. ಮುಂದಿನ ದಿನಗಳಲ್ಲಿ ನ್ಯಾಯಾಧೀಶನಾಗಿ ಅತ್ಯಂತ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತೇನೆ,” ಎಂದು ಭಾವುಕರಾಗಿ ನುಡಿದರು.

2004ರಲ್ಲಿ ಇದೇ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದ ಮಹದೇವಸ್ವಾಮಿ ಅವರು, ಅಂದಿನಿಂದಲೇ ಶಿಸ್ತು ಮತ್ತು ಪರಿಶ್ರಮಕ್ಕೆ ಹೆಸರಾಗಿದ್ದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಹಾಗೂ ಶಾರದಾ ವಿಲಾಸ ಕಾನೂನು ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪೂರೈಸಿದ ಇವರು, ನ್ಯಾಯಾಂಗ ಸೇವೆಗೆ ಪ್ರವೇಶಿಸಲು ಸತತ ಏಳು ಬಾರಿ ಪ್ರಯತ್ನಿಸಿದ್ದರು. ಎದೆಗುಂದದೆ ಎಂಟನೇ ಬಾರಿಗೆ ಪರೀಕ್ಷೆ ಎದುರಿಸಿ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ, “ನಿರಂತರ ಪ್ರಯತ್ನವಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ” ಎಂಬುದನ್ನು ಯುವಜನತೆಗೆ ಸಾಬೀತುಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವೃಂದ ಹಾಗೂ ಸಿಬ್ಬಂದಿಗಳು ಹಾಜರಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಯೊಬ್ಬರು ಉನ್ನತ ಸ್ಥಾನಕ್ಕೇರಿರುವುದು ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!