ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸ್ಥಳೀಯ ಸುದ್ದಿಗಳು

“ಸರ್ಕಾರಿ ಅಧಿಕಾರಿಗೆ ರಕ್ಷಣೆ ಕೊಡಿ, ತಪ್ಪಿತಸ್ಥನಿಗೆ ಶಿಕ್ಷೆ ನೀಡಿ”: ಎಸ್.ಪಿ ಹಾಗೂ ಸಿಇಒ ಮುಂದೆ ಪಿಡಿಒ ಸಂಘದ ಆಗ್ರಹ – ಕಠಿಣ ಕ್ರಮಕ್ಕೆ ಜಿಲ್ಲಾಧ್ಯಕ್ಷ ಗಿರೀಶ್ ನಾಯಕ್ ಪಟ್ಟು..

Share News

ಸಿದ್ದಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಾಜೇಶ ಆರ್. ನಾಯ್ಕ ಅವರ ಮೇಲೆ ಇತ್ತೀಚೆಗೆ ನಡೆದ ಹಲ್ಲೆ ಹಾಗೂ ಜೀವ ಬೆದರಿಕೆ ಘಟನೆಯನ್ನು ತೀವ್ರವಾಗಿ ಖಂಡಿಸಿ, ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ (ನೋ.) ವತಿಯಿಂದ ಜಿಲ್ಲಾಧ್ಯಕ್ಷ ಗಿರೀಶ್ ನಾಯಕ ಅವರ ನೇತೃತ್ವದಲ್ಲಿ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಇಂದು ಅಧಿಕೃತವಾಗಿ ಮನವಿ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿದ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನಿಯೋಗದ ಅಹವಾಲುಗಳಿಗೆ ಅತ್ಯುತ್ತಮವಾಗಿ ಸ್ಪಂದಿಸಿದ್ದಾರೆ. ಪಿಡಿಒ ರಾಜೇಶ್ ಮೇಲಿನ ಹಲ್ಲೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಚರ್ಚಿಸಿ, ಆರೋಪಿಯ ವಿರುದ್ಧ ಸೂಕ್ತ ಹಾಗೂ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲು ಅಗತ್ಯ ಕ್ರಮವಹಿಸುವುದಾಗಿ ಸಿಇಒ ಭರವಸೆ ನೀಡಿದ್ದಾರೆ. ಇದರ ಜೊತೆಗೆ, ಶಿರಸಿ ತಾಲೂಕಿನ ಪಿಡಿಒಗಳನ್ನು ಜನಗಣತಿ ಕರ್ತವ್ಯಕ್ಕೆ ನಿಯೋಜನೆ ಮಾಡಿರುವ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ತಾವು ಚರ್ಚಿಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಕಾರವಾರ ತಾಲೂಕಿನ ಕಡವಾಡ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯವರನ್ನು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರದೆ ಏಕಾಏಕಿ BLO ಕರ್ತವ್ಯಕ್ಕೆ ನಿಯೋಜನೆ ಮಾಡಿರುವ ಬಗ್ಗೆ ನಿನ್ನೆಯಷ್ಟೇ ಸಂಘಟನೆಯಿಂದ ಮಾನ್ಯ ಸಿಇಒ ಹಾಗೂ ಉಪ ಕಾರ್ಯದರ್ಶಿಗಳ ಗಮನಕ್ಕೆ ತರಲಾಗಿದ್ದು, ಈ ಬಗ್ಗೆಯೂ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಇಒ ಅವರು ನಿಯೋಗಕ್ಕೆ ಸ್ಪಷ್ಟಪಡಿಸಿದ್ದಾರೆ.

ಅಧಿಕಾರಿಗಳ ಈ ಎಲ್ಲಾ ಜ್ವಲಂತ ಸಮಸ್ಯೆಗಳಿಗೆ ತ್ವರಿತವಾಗಿ ಮತ್ತು ಅತ್ಯುತ್ತಮ ರೀತಿಯಲ್ಲಿ ಸ್ಪಂದಿಸಿದ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪಿಡಿಒ ಸಂಘಟನೆಯ ಪರವಾಗಿ ಜಿಲ್ಲಾಧ್ಯಕ್ಷರಾದ ಗಿರೀಶ್ ನಾಯಕ ಅವರು ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಹಾಗೆಯೇ, ಈ ವಿಚಾರಗಳನ್ನು ಮಾನ್ಯ ಸಿಇಒ ಅವರ ಗಮನಕ್ಕೆ ತಂದು ತ್ವರಿತ ಕ್ರಮ ಕೈಗೊಳ್ಳಲು ಕಾರಣೀಭೂತರಾದ ಮಾನ್ಯ ಉಪ ಕಾರ್ಯದರ್ಶಿಗಳಿಗೂ ಸಂಘದ ವತಿಯಿಂದ ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ, ಜಿಲ್ಲಾ ಪಂಚಾಯತದ ಮುಖ್ಯ ಲೆಕ್ಕಾಧಿಕಾರಿಗಳಿಗೆ, ಮುಖ್ಯ ಯೋಜನಾಧಿಕಾರಿಗಳಿಗೆ, ಯೋಜನಾ ನಿರ್ದೇಶಕರಿಗೆ ಹಾಗೂ ಜಿಲ್ಲಾ ಪಂಚಾಯತದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೂ ಅವರು ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ.

ಇದೇ ವೇಳೆ, ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಂಘದ ಬೆಂಬಲಕ್ಕೆ ನಿಂತು ಹಾಜರಿದ್ದ ಗೌರವಾಧ್ಯಕ್ಷರು, ರಾಜ್ಯ ಪರಿಷತ್ ಸದಸ್ಯರು, ಸಂಘಟನಾ ಕಾರ್ಯದರ್ಶಿಗಳು, ಮಹಿಳಾ ಉಪಾಧ್ಯಕ್ಷರು ಹಾಗೂ ಜಿಲ್ಲೆಯ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾಧ್ಯಕ್ಷ ಗಿರೀಶ್ ನಾಯಕ ಅವರು ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದು, ಮುಂದೆಯೂ ಒಗ್ಗಟ್ಟಿನಿಂದ ಇಲಾಖೆಯ ಹಾಗೂ ಅಧಿಕಾರಿಗಳ ಹಿತರಕ್ಷಣೆಗೆ ಸದಾ ಸಿದ್ಧರಿರುವುದಾಗಿ ತಿಳಿಸಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!