ಎಸ್.ಸಿ/ಎಸ್.ಟಿ ಜಾಗೃತ ನೌಕರರ ಸಂಘದ 6ನೇ ರಾಜ್ಯಮಟ್ಟದ ಐಕ್ಯತಾ ಸಮಾವೇಶ; ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ

ಚಿಕ್ಕಬಳ್ಳಾಪುರ: ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಸಿ/ಎಸ್.ಟಿ. ಜಾಗೃತ ನೌಕರರ ಸಂಘದ ವತಿಯಿಂದ ಆಯೋಜಿಸಲಾಗಿರುವ 6ನೇ ರಾಜ್ಯಮಟ್ಟದ ಐಕ್ಯತಾ ಸಮಾವೇಶದ ಕುರಿತು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ವಿಭಾಗೀಯ ರಾಜ್ಯ ಉಪಾಧ್ಯಕ್ಷ ಪ್ರದೀಪ್ ಎಸ್. ಹಾಗೂ ತಾಲ್ಲೂಕು ಅಧ್ಯಕ್ಷ ನರಸಿಂಹ ಎಂ.ಕೆ. ಮಾತನಾಡಿ, “ಎಸ್.ಸಿ/ಎಸ್.ಟಿ. ನೌಕರರ ಹಕ್ಕುಗಳು, ಸಮಸ್ಯೆಗಳು ಹಾಗೂ ಸಂವಿಧಾನಬದ್ಧ ಸೌಲಭ್ಯಗಳ ರಕ್ಷಣೆಗಾಗಿ ಒಗ್ಗಟ್ಟು ಮೂಡಿಸಲು ಈ ರಾಜ್ಯಮಟ್ಟದ ಐಕ್ಯತಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಶೋಷಿತ ಸಮುದಾಯದ ನೌಕರರನ್ನು ಒಂದೇ ವೇದಿಕೆಯಲ್ಲಿ ಸಂಘಟಿಸುವುದು ಮತ್ತು ಅವರ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗುವುದು ಈ ಸಮಾವೇಶದ ಮುಖ್ಯ ಗುರಿ” ಎಂದು ತಿಳಿಸಿದರು.
ಪ್ರಮುಖ ನಾಯಕರ ಭಾಗಿ:
ಈ ಸಮಾವೇಶದಲ್ಲಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಡಾ. ಜಿ. ಪರಮೇಶ್ವರ್, ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ, ಸತೀಶ್ ಜಾರಕಿಹೊಳಿ, ಶಿವರಾಜ್ ತಂಗಡಗಿ ಸೇರಿದಂತೆ ಹಲವು ಸಚಿವರು, ಶಾಸಕರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಉಚಿತ ಬಸ್ ವ್ಯವಸ್ಥೆ:
ಸಮುದಾಯದ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ನಿವೃತ್ತ ನೌಕರರು ಹಾಗೂ ಮುಖಂಡರು ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು. ಸಮಾವೇಶಕ್ಕೆ ತೆರಳಲು ಚಿಂತಾಮಣಿ ತಾಲೂಕಿನಿಂದ ಉಚಿತ ಬಸ್ ಪ್ರಯಾಣ ಹಾಗೂ ಇತರ ಅಗತ್ಯ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಸಿ/ಎಸ್.ಟಿ ನಿಗಮಗಳ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಎಂ., ಜಿಲ್ಲಾ ಗೌರವಾಧ್ಯಕ್ಷ ಕೆ.ಎಂ. ಶಿವಪ್ರಸಾದ್, ಉಪಾಧ್ಯಕ್ಷೆ ರಾಧಾ ಡಿ.ಕೆ., ಜಿಲ್ಲಾ ಉಪಾಧ್ಯಕ್ಷ ನರಸಿಂಹಪ್ಪ ಎನ್.ಕೆ., ಮುಖಂಡರಾದ ಶಿವಾನಂದ, ಮಂಜುನಾಥ ಎನ್.ವಿ., ಎಂ. ಆಂಜನಪ್ಪ, ನರಸಿಂಹ ಚಾಪುರ, ಬೆಸ್ಕಾಂ ಮಂಜುನಾಥ್, ಜಯರಾಮ್, ರೆಡ್ಡಪ್ಪ, ರವಿ ಬಿ.ಕೆ., ನರೇಂದ್ರ ವೈ.ಎಸ್. ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ವರದಿ: ಕೆ. ಮುತ್ತಕದಹಳ್ಳಿ ವೆಂಕಟಾಚಲಪತಿ, ಪೊಲೀಸ್ ವಾರ್ತೆ, ಚಿಕ್ಕಬಳ್ಳಾಪುರ.



