ರಾಜ್ಯ ಸುದ್ದಿಜಿಲ್ಲಾ ಸುದ್ದಿತಾಲೂಕು

ಚಿಂತಾಮಣಿ: ಬೈಕ್ ಹಾಗೂ ಎಕ್ಸ್‌ಯುವಿ ಕಾರು ನಡುವೆ ಭೀಕರ ಅಪಘಾತ; ಮೂವರ ಕಾಲು ಕಟ್, ಸಾವು-ಬದುಕಿನ ನಡುವೆ ಹೋರಾಟ

Share News

ಚಿಂತಾಮಣಿ: ತಾಲೂಕಿನ ಚಾಪುರ ಗೇಟ್ ಬಳಿ ಸೋಮವಾರ ಮಧ್ಯಾಹ್ನ ಬೈಕ್ ಮತ್ತು ಮಹೇಂದ್ರ ಎಕ್ಸ್‌ಯುವಿ (XUV) ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ರಭಸಕ್ಕೆ ಗಾಯಾಳುಗಳ ಕಾಲುಗಳು ಕಟ್ ಆಗಿದ್ದು, ಸದ್ಯ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಗಾಯಗೊಂಡವರು ಚಿಂತಾಮಣಿ ನಗರದ ವಿನೋಭ ಕಾಲೋನಿಯ ನಿವಾಸಿಗಳು ಎಂದು ಗುರುತಿಸಲಾಗಿದೆ. ಒಂದೇ ಬೈಕ್‌ನಲ್ಲಿ ಮೂವರು ಯುವಕರು (ತ್ರಿಬಲ್ ರೈಡಿಂಗ್) ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಬೈಕ್ ಸವಾರರ ಅತಿ ವೇಗ ಹಾಗೂ ನಿರ್ಲಕ್ಷ್ಯವೇ ಅಪಘಾತಕ್ಕೆ ಪ್ರಾಥಮಿಕ ಕಾರಣ ಎಂದು ಹೇಳಲಾಗುತ್ತಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರರ ಕಾಲುಗಳು ತುಂಡಾಗಿದ್ದು, ಸ್ಥಳದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ಅಪಘಾತ ಸಂಭವಿಸಿ ಅರ್ಧ ಗಂಟೆಯಾದರೂ ಸ್ಥಳಕ್ಕೆ ಆಂಬುಲೆನ್ಸ್ ಬಾರದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಗಾಯಾಳುಗಳು ನೋವಿನಿಂದ ರಸ್ತೆಯಲ್ಲೇ ನರಳಾಡುತ್ತಿದ್ದರೂ ಆಂಬುಲೆನ್ಸ್ ನಿರ್ವಹಣಾ ಮಂಡಳಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿತ್ತು. “ತುರ್ತು ಸಮಯದಲ್ಲಿ ಆಂಬುಲೆನ್ಸ್ ಲಭ್ಯವಿಲ್ಲದಿದ್ದರೆ ಜನರ ಪ್ರಾಣಕ್ಕೆ ಬೆಲೆ ಎಲ್ಲಿದೆ?” ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

ಘಟನಾ ಸ್ಥಳಕ್ಕೆ ಕೈವಾರ ಹೊರಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಗಾಯಾಳುಗಳನ್ನು ಖಾಸಗಿ ವಾಹನಗಳ ಸಹಾಯದೊಂದಿಗೆ ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಸ್ತುತ ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆ ಇದೆ.

​ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಚಾಲಕ ಹಾಗೂ ಬೈಕ್ ಸವಾರರ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!