ಕಟಾವು ಯಂತ್ರಕ್ಕೆ ಸಿಲುಕಿ ತಾಯಿ ದುರಂತ ಸಾವು: ದೃಷ್ಟಿಹೀನ ಪತಿ, ಮೂವರು ಮಕ್ಕಳ ಬಾಳು ಕತ್ತಲು

ಧಾರವಾಡ: ಕಣ್ಣಿಲ್ಲದ ಪತಿ ಹಾಗೂ ಮೂವರು ಮಕ್ಕಳ ಹಸಿವು ನೀಗಿಸಲು ಕಷ್ಟಪಟ್ಟು ದುಡಿಯುತ್ತಿದ್ದ ತಾಯಿಯೊಬ್ಬರು ಹೆಸರು ಕಟಾವು ಮಾಡುವ ಯಂತ್ರಕ್ಕೆ ಸಿಲುಕಿ ಭೀಕರವಾಗಿ ಮೃತಪಟ್ಟ ಘಟನೆ ಜಿಲ್ಲೆಯ ಹಾರೋಬೆಳವಾಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಯಲ್ಲವ್ವ ದುರಂತ ಅಂತ್ಯಕಂಡ ದುರದೃಷ್ಟಕರ ಮಹಿಳೆ.
ಘಟನೆಯ ವಿವರ:
ಮೀನುಗಾರಿಕೆ ಹಾಗೂ ಕೃಷಿ ಕೂಲಿ ಕೆಲಸ ಮಾಡುತ್ತಿದ್ದ ಯಲ್ಲವ್ವ, ಹೊಲದಲ್ಲಿ ಹೆಸರು ಬೆಳೆ ಕಟಾವು ಮಾಡುವಾಗ ಯಂತ್ರದಿಂದ ಕೆಳಗೆ ಬಿದ್ದ ಕಾಳುಗಳನ್ನು ಆರಿಸುತ್ತಿದ್ದರು. ಈ ವೇಳೆ ಗಮನಿಸದೇ ಹಿಂದಿನಿಂದ ಬಂದ ಹೆಸರು ಕಟಾವು ಯಂತ್ರ (Harvester Machine) ಯಲ್ಲವ್ವನ ಮೇಲೆಯೇ ಹರಿದಿದೆ. ಯಂತ್ರದ ಚಕ್ರ ಮತ್ತು ಭಾಗಗಳಿಗೆ ಸಿಲುಕಿ ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಕುಟುಂಬದ ಏಕೈಕ ಆಸರೆಯಾಗಿದ್ದ ಯಲ್ಲವ್ವ ಅವರ ಸಾವಿನ ಸುದ್ದಿ ಕೇಳಿ ದೃಷ್ಟಿಹೀನ ಪತಿ ಹಾಗೂ ಮೂವರು ಮಕ್ಕಳು ದಿಕ್ಕುತೋಚದೆ ಕಣ್ಣೀರಿಡುತ್ತಿದ್ದು, ಗ್ರಾಮಸ್ಥರಲ್ಲಿ ತೀವ್ರ ಶೋಕ ಸಾಗರ ಮುಳುಗಿದೆ.
ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



