ಕುಡಿದು ಬಂದು ಪೋಷಕರೊಂದಿಗೆ ಜಗಳ: 112 ಪೊಲೀಸರ ತಕ್ಷಣದ ಮಧ್ಯಪ್ರವೇಶದಿಂದ ತಪ್ಪಿದ ಅನಾಹುತ

ಆಳಂದ: ತಾಲೂಕಿನ ಹಾಳ ತಡಕಲ್ ಗ್ರಾಮದಲ್ಲಿ ಮದ್ಯಪಾನ ಮಾಡಿ ಹೆತ್ತ ಪೋಷಕರೊಂದಿಗೇ ವಿನಾಕಾರಣ ಜಗಳ ತೆಗೆದು ಗಲಾಟೆ ಮಾಡುತ್ತಿದ್ದ ವ್ಯಕ್ತಿಯನ್ನು 112 ತುರ್ತು ಪೊಲೀಸ್ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ನಿಯಂತ್ರಿಸಿದ ಘಟನೆ ಸೋಮವಾರ ನಡೆದಿದೆ.
ಜುಲೈ 14ರಂದು ಹಾಳ ತಡಕಲ್ ಗ್ರಾಮದ ನಿವಾಸಿಯೊಬ್ಬರು 112 ಸಹಾಯವಾಣಿಗೆ ಕರೆ ಮಾಡಿ, “ತಮ್ಮ ಅಣ್ಣ ಮದ್ಯಪಾನ ಮಾಡಿ ಮನೆಗೆ ಬಂದು ತಂದೆ-ತಾಯಿಯೊಂದಿಗೆ ಗಲಾಟೆ ಮಾಡುತ್ತಿದ್ದಾನೆ” ಎಂದು ತುರ್ತು ಮಾಹಿತಿ (E.ID-2878869) ನೀಡಿದ್ದರು.
ಮಾಹಿತಿ ಲಭ್ಯವಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ 112 ಪೊಲೀಸ್ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಜಗಳ ಮಾಡುತ್ತಿದ್ದ ವ್ಯಕ್ತಿಗೆ ಕಾನೂನಿನ ತಿಳಿವಳಿಕೆ ನೀಡಿ, ಕುಟುಂಬದ ಸದಸ್ಯರೊಂದಿಗೆ ಶಾಂತಿಯುತವಾಗಿ ವರ್ತಿಸುವಂತೆ ಕಡಕ್ ಎಚ್ಚರಿಕೆ ನೀಡಿದರು.
ಬಳಿಕ ಈ ಘಟನೆ ಕುರಿತು ಮುಂದಿನ ಕ್ರಮಕ್ಕಾಗಿ ಆಳಂದ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ (SHO) ಮಾಹಿತಿ ನೀಡಲಾಯಿತು. ಪೊಲೀಸರ ಸಮಯೋಚಿತ ಮಧ್ಯಪ್ರವೇಶದಿಂದ ಯಾವುದೇ ಅಹಿತಕರ ಘಟನೆ ಸಂಭವಿಸದೆ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದು, ತದನಂತರ ಪ್ರಕರಣವನ್ನು ಮುಕ್ತಾಯಗೊಳಿಸಲಾಯಿತು.
ಯಾವುದೇ ರೀತಿಯ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ತಕ್ಷಣವೇ 112 ಸಹಾಯವಾಣಿಯನ್ನು ಬಳಸಿಕೊಳ್ಳಬೇಕು ಎಂದು ಈ ಮೂಲಕ ಪೊಲೀಸರು ಮನವಿ ಮಾಡಿದ್ದಾರೆ.



