ಮಹದೇಶ್ವರ ಬೆಟ್ಟದ ಹೆದ್ದಾರಿ: ತಡೆಗೋಡೆ ಮೇಲೆ ಅಪರಿಚಿತನ ನಿದ್ರೆ — ಚಿರತೆ ದಾಳಿ ಭೀತಿ!

ತಾಳುಬೆಟ್ಟ / ಹನೂರು: ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವ ಮುಖ್ಯ ಹೆದ್ದಾರಿಯ ಎರಡನೇ ತಿರುವಿನಲ್ಲಿ ಆತಂಕಕಾರಿ ದೃಶ್ಯವೊಂದು ಕಂಡುಬಂದಿದ್ದು, ಅಪರಿಚಿತ ವ್ಯಕ್ತಿಯೊಬ್ಬ ರಸ್ತೆಯ ಅಪಾಯಕಾರಿ ತಡೆಗೋಡೆಯ (Parapet Wall) ಮೇಲೆಯೇ ನಿದ್ರೆಗೆ ಜಾರಿದ್ದಾನೆ.
ತಾಳುಬೆಟ್ಟ ಹಾಗೂ ಸುತ್ತಮುತ್ತಲ ಅರಣ್ಯ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಚಿರತೆ ಸೇರಿದಂತೆ ಕ್ರೂರ ಕಾಡುಪ್ರಾಣಿಗಳ ಸಂಚಾರ ಹೆಚ್ಚಾಗಿದೆ. ಆಗಾಗ ಹೆದ್ದಾರಿಯಲ್ಲೇ ಚಿರತೆಗಳು ಪ್ರತ್ಯಕ್ಷವಾಗಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿರುವ ಉದಾಹರಣೆಗಳಿವೆ.
ಇಂತಹ ಸನ್ನಿವೇಶದಲ್ಲಿ, ಕಡಿದಾದ ತಿರುವಿನ ತಡೆಗೋಡೆಯ ಮೇಲೆ ಕಾಲು ಚಾಚಿ ಮಲಗಿರುವ ಈ ವ್ಯಕ್ತಿ, ಯಾವುದೇ ಕ್ಷಣದಲ್ಲೂ ಕಾಡುಪ್ರಾಣಿಯ ದಾಳಿಗೆ ತುತ್ತಾಗುವ ಅಥವಾ ಆಕಸ್ಮಿಕವಾಗಿ ಪ್ರಪಾತಕ್ಕೆ ಬಿದ್ದು ಜೀವ ಕಳೆದುಕೊಳ್ಳುವ ಭೀಕರ ಅಪಾಯ ಎದುರಾಗಿದೆ.
ತಕ್ಷಣದ ರಕ್ಷಣೆಗೆ ಆಗ್ರಹ:
ಯಾವುದೇ ಅನಾಹುತ ಸಂಭವಿಸಿ ಪ್ರಾಣಹಾನಿಯಾಗುವ ಮುನ್ನ ಸಂಬಂಧಪಟ್ಟ ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಈ ಅಪರಿಚಿತ ವ್ಯಕ್ತಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕಾಗಿ ಸಾರ್ವಜನಿಕರು ಹಾಗೂ ಭಕ್ತಾದಿಗಳು ತೀವ್ರವಾಗಿ ಆಗ್ರಹಿಸಿದ್ದಾರೆ.
ವರದಿ :- ಶಾರುಕ್ ಖಾನ್ ಹನೂರು



