ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸ್ಥಳೀಯ ಸುದ್ದಿಗಳು

ಗ್ಯಾಸ್ ಅಭಾವ: ಕೊಡಗಿನಲ್ಲಿ ಸೌದೆ, ಇದ್ದಿಲಿಗೆ ಹೆಚ್ಚಿದ ಡಿಮ್ಯಾಂಡ್!

Share News

ಮಡಿಕೇರಿ: ಜಾಗತಿಕ ರಾಜಕೀಯ ವಿದ್ಯಮಾನಗಳು ಮತ್ತು ಗಲ್ಫ್ ರಾಷ್ಟ್ರಗಳ ನಡುವಿನ ಯುದ್ಧದ ಪರಿಣಾಮ ಇದೀಗ ಕೊಡಗು ಜಿಲ್ಲೆಯ ಅಡುಗೆ ಮನೆಯ ಮೇಲೂ ತಟ್ಟಿದೆ. ಅಡುಗೆ ಅನಿಲ (LPG) ಪೂರೈಕೆಯಲ್ಲಿ ಉಂಟಾಗಿರುವ ತೀವ್ರ ವ್ಯತ್ಯಯದಿಂದಾಗಿ, ಜಿಲ್ಲೆಯ ಜನರು ಅನಿವಾರ್ಯವಾಗಿ ಮತ್ತೆ ಸೌದೆ ಒಲೆ ಮತ್ತು ಇದ್ದಿಲಿನತ್ತ ಮುಖ ಮಾಡುತ್ತಿದ್ದಾರೆ.

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಜಾಗತಿಕವಾಗಿ ಅನಿಲ ಪೂರೈಕೆಯಲ್ಲಿ ಅಸ್ತವ್ಯಸ್ತ ಉಂಟಾಗಿದೆ. ಪ್ರವಾಸೋದ್ಯಮಕ್ಕೆ ಹೆಸರಾದ ಕೊಡಗಿನಲ್ಲಿ ನೂರಾರು ಹೋಟೆಲ್, ರೆಸಾರ್ಟ್ ಮತ್ತು ಹೋಮ್ ಸ್ಟೇಗಳಿವೆ. ಇಲ್ಲಿನ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಪೂರೈಕೆ ಸ್ಥಗಿತಗೊಂಡಿರುವುದು ಪ್ರವಾಸೋದ್ಯಮ ಕ್ಷೇತ್ರದ ಮೇಲೆ ದೊಡ್ಡ ಹೊಡೆತ ನೀಡಿದೆ. ಅಡುಗೆ ಅನಿಲ ಸಿಗದೆ ಮಾಲೀಕರು ಮತ್ತು ಪ್ರವಾಸಿಗರು ಪರದಾಡುವಂತಾಗಿದೆ.

ಹೋಟೆಲ್‌ಗಳಲ್ಲಿ ಹೊಗೆಮುಕ್ತ ಪರಿಸರಕ್ಕಾಗಿ ಈವರೆಗೆ ಗ್ಯಾಸ್ ಬಳಸಲಾಗುತ್ತಿತ್ತು. ಆದರೆ ಈಗ ಗ್ಯಾಸ್ ಅಲಭ್ಯತೆಯಿಂದಾಗಿ ಹೋಟೆಲ್ ಮಾಲೀಕರು ಸಾಂಪ್ರದಾಯಿಕ ಶೈಲಿಯ ಮೊರೆ ಹೋಗಿದ್ದಾರೆ. ಗ್ರಿಲ್ ಮತ್ತು ತಂದೂರಿ ಚಿಕನ್ ತಯಾರಿಕೆಗೆ ಈಗ ಇದ್ದಿಲಿನ ಬಳಕೆ ಅನಿವಾರ್ಯವಾಗಿದ್ದು, ಮಾರುಕಟ್ಟೆಯಲ್ಲಿ ಇದ್ದಿಲಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ.

ಈ ಹಿಂದೆ ಹಳ್ಳಿಗಳಿಗೆ ಸೀಮಿತವಾಗಿದ್ದ ಸೌದೆ ಒಲೆಗಳು ಈಗ ನಗರದ ಹೋಟೆಲ್ ಮತ್ತು ರೆಸಾರ್ಟ್‌ಗಳಿಗೂ ಲಗ್ಗೆ ಇಟ್ಟಿವೆ. ಇದರಿಂದಾಗಿ ಸೌದೆ ಡಿಪೋಗಳಲ್ಲಿ ಗಿರಾಕಿಗಳ ಸಂಖ್ಯೆ ಹೆಚ್ಚಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಸೌದೆಗೆ 8 ರೂಪಾಯಿಯಂತೆ ಮಾರಾಟವಾಗುತ್ತಿದೆ. ಹಳೆಯ ಮನೆಯ ಸಾಮಗ್ರಿ ಮಾರಾಟ ಕೇಂದ್ರಗಳಲ್ಲೂ ಸೌದೆಗಾಗಿ ಜನರು ಸಾಲು ನಿಲ್ಲುತ್ತಿದ್ದಾರೆ.

ಜಿಲ್ಲೆಯ ಕಾಫಿ ತೋಟಗಳಲ್ಲಿ ಹೇರಳವಾಗಿ ಸೌದೆ ಲಭ್ಯವಿರುವುದು ಸದ್ಯದ ಪರಿಸ್ಥಿತಿಯಲ್ಲಿ ದೊಡ್ಡ ವರದಾನವಾಗಿದೆ. ರೆಸಾರ್ಟ್ ಮತ್ತು ಹೋಟೆಲ್ ಮಾಲೀಕರು ತೋಟದ ಸೌದೆಯನ್ನು ಬಳಸಿಕೊಂಡು ಅಡುಗೆ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಗ್ಯಾಸ್ ಕೊರತೆಯ ನಡುವೆಯೂ ಸಾಂಪ್ರದಾಯಿಕ ಇಂಧನ ಮೂಲಗಳು ಕೊಡಗಿನ ಜನರ ಕೈಹಿಡಿದಿವೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!