ರಂಗತರಂಗದ 19ನೇ ತುಳು ನಾಟಕ ‘ವಿಕ್ರಂ ವೇಧ’ಗೆ ಅದ್ದೂರಿ ಮುಹೂರ್ತ

ಕಾಪು: ಕಾಪುವಿನ ಹೆಸರಾಂತ ಸಾಂಸ್ಕೃತಿಕ ಸಂಸ್ಥೆಯಾದ ರಂಗತರಂಗದ 19ನೇ ಸಾಮಾಜಿಕ ಹಾಸ್ಯಮಯ ತುಳು ನಾಟಕ **”ವಿಕ್ರಂ ವೇಧ”**ದ ಮುಹೂರ್ತ ಸಮಾರಂಭವು ಬುಧವಾರ ಕಾಪು ಶ್ರೀ ಲಕ್ಷ್ಮೀ ನಾರಾಯಣ ದೇವಾಸ್ಥಾನದಲ್ಲಿ ಭಕ್ತಿಭಾವ ಹಾಗೂ ಸಂಭ್ರಮದ ವಾತಾವರಣದಲ್ಲಿ ಅದ್ದೂರಿಯಾಗಿ ನೆರವೇರಿತು.
ದಿವಂಗತ ಶ್ರೀ ಲೀಲಾಧರ ಶೆಟ್ಟಿಯವರ ಸಾರಥ್ಯದಲ್ಲಿ ಆರಂಭಗೊಂಡು ಅನೇಕ ಯಶಸ್ವಿ ನಾಟಕಗಳನ್ನು ರಂಗಭೂಮಿಗೆ ನೀಡಿರುವ ರಂಗತರಂಗ ಸಂಸ್ಥೆಯು, ಇದೀಗ ತನ್ನ 19ನೇ ನಾಟಕದ ಮೂಲಕ ಮತ್ತೊಮ್ಮೆ ಕಲಾಭಿಮಾನಿಗಳ ಮನಗೆಲ್ಲಲು ಸಜ್ಜಾಗಿದೆ. ಕಾರ್ಯಕ್ರಮದ ಅಂಗವಾಗಿ ದೇವಾಲಯದ ಪ್ರಧಾನ ಅರ್ಚಕರಾದ ಜನಾರ್ದನ್ ಭಟ್ಟರು ವಿಶೇಷ ಪೂಜೆ ನೆರವೇರಿಸಿ, ನಾಟಕದ ಯಶಸ್ಸಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಕಲಾವಿದರಿಗೆ ಹಾಗೂ ಅತಿಥಿಗಳಿಗೆ ಆಶೀರ್ವಾದ ನೀಡಿದರು.
ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಶಾಸಕರಾದ ಲಾಲಾಜಿ ಆರ್. ಮೆಂಡನ್ ದೀಪ ಬೆಳಗಿಸಿ ನಾಟಕಕ್ಕೆ ಶುಭ ಹಾರೈಸಿದರು. ಬಳಿಕ ಮಾತನಾಡಿದ ಅವರು, “ರಂಗತರಂಗ ಸಂಸ್ಥೆಯ 18ನೇ ನಾಟಕದ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆ. ಈಗ 19ನೇ ನಾಟಕದ ಮುಹೂರ್ತದಲ್ಲೂ ಭಾಗಿಯಾಗಿರುವುದು ನನಗೆ ಅಪಾರ ಸಂತೋಷ ತಂದಿದೆ. ಕಲೆಯನ್ನು ಉಳಿಸಿ ಬೆಳೆಸುವ ಇಂತಹ ಸಂಸ್ಥೆಗಳು ಸಮಾಜಕ್ಕೆ ಮಾದರಿಯಾಗಿವೆ. ಹಿಂದಿನ ಎಲ್ಲ ನಾಟಕಗಳಂತೆ ‘ವಿಕ್ರಂ ವೇಧ’ ಕೂಡ ಅದ್ಭುತ ಯಶಸ್ಸು ಗಳಿಸಿ ಜನಮನ ಗೆಲ್ಲಲಿ” ಎಂದು ಹಾರೈಸಿದರು.
ಸಂಸ್ಥೆಯ ಮುಖ್ಯಸ್ಥ ಶರತ್ ಉಚ್ಚಿಲ್ ಮಾತನಾಡಿ, “ವಿಕ್ರಂ ವೇಧ” ನಾಟಕವು ಕುಟುಂಬದ ಬದುಕನ್ನು ಆಧರಿಸಿದ ಸಾಮಾಜಿಕ ಹಾಸ್ಯಮಯ ಕಥಾಹಂದರ ಹೊಂದಿದೆ. ಗಂಡ–ಹೆಂಡತಿಯ ಪ್ರೀತಿ, ಪ್ರೇಮ, ಭಿನ್ನಾಭಿಪ್ರಾಯ, ವಿರಸ, ವಿಚ್ಛೇದನ ಹಾಗೂ ಸಂಸಾರದಲ್ಲಿ ನಡೆಯುವ ನೈಜ ಘಟನೆಗಳನ್ನು ಮನರಂಜನೆಯೊಂದಿಗೆ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ಇಲ್ಲಿದೆ. ಕುಟುಂಬ ಮೌಲ್ಯಗಳು ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಈ ನಾಟಕಕ್ಕೆ ಕಲಾಭಿಮಾನಿಗಳು ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಸಂಸ್ಥೆಯ ಪ್ರಮುಖರಾದ ಪ್ರಸನ್ನ ಶೆಟ್ಟಿ ಮಾತನಾಡಿ, ನಾಟಕದ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿದ್ದು, ಕಲಾವಿದರು ಅತ್ಯುತ್ತಮ ಪ್ರದರ್ಶನ ನೀಡಲು ಶ್ರಮಿಸುತ್ತಿದ್ದಾರೆ. “ವಿಕ್ರಂ ವೇಧ” ನಾಟಕದ ಪ್ರಥಮ ಪ್ರದರ್ಶನವು ಆಗಸ್ಟ್ ತಿಂಗಳಲ್ಲಿ ನಡೆಯಲಿದ್ದು, ಈ ನಾಟಕವನ್ನು ಯಶಸ್ವಿಗೊಳಿಸಲು ಎಲ್ಲ ಕಲಾಭಿಮಾನಿಗಳು, ದಾನಿಗಳು ಹಾಗೂ ಸಾರ್ವಜನಿಕರು ಸಹಕಾರ ನೀಡುವಂತೆ ವಿನಂತಿಸಿದರು.
ಪದಾಧಿಕಾರಿಗಳು, ಕಲಾವಿದರು, ತಾಂತ್ರಿಕ ತಂಡದ ಸದಸ್ಯರು, ಕಲಾಪೋಷಕರು, ಅಭಿಮಾನಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದು ನಾಟಕ ತಂಡಕ್ಕೆ ಶುಭ ಹಾರೈಸಿದರು. ಕಾಪುವಿನ ಸಾಂಸ್ಕೃತಿಕ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಮೂಡಿಬರುತ್ತಿರುವ ಈ ನಾಟಕವು ಪ್ರೇಕ್ಷಕರ ಮನ ಗೆಲ್ಲುವ ಪೂರ್ಣ ವಿಶ್ವಾಸವನ್ನು ಕಲಾಭಿಮಾನಿಗಳು ವ್ಯಕ್ತಪಡಿಸಿದ್ದಾರೆ.







