ರಾಣೇಬೆನ್ನೂರು: ಶಾಸಕ ಪ್ರಕಾಶ್ ಕೋಳಿವಾಡ ಹೆಲ್ಮೆಟ್ ರಹಿತ ಬೈಕ್ ಸವಾರಿ – ಸಾರ್ವಜನಿಕರ ಚರ್ಚೆಗೆ ಗ್ರಾಸ, ದಂಡ ಬೀಳುತ್ತಾ?

ರಾಣೇಬೆನ್ನೂರು: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಶಾಸಕ ಪ್ರಕಾಶ್ ಕೆ. ಕೋಳಿವಾಡ ಅವರು ನಗರದ ಕಾರ್ಯಕ್ರಮವೊಂದಕ್ಕೆ ಹೆಲ್ಮೆಟ್ ಧರಿಸದೇ ಬೈಕ್‌ನಲ್ಲಿ ತೆರಳಿರುವ ಘಟನೆ ಇದೀಗ ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಕಾರ್ಯಕ್ರಮವೊಂದರ ಉದ್ಘಾಟನೆಗೆ ಶಾಸಕರು ಕಾರಿನ ಬದಲಾಗಿ ಬೈಕ್‌ನಲ್ಲಿ ತೆರಳಿ ಸರಳತೆ ಮೆರೆದರೂ, ಸಂಚಾರ ನಿಯಮ ಗಾಳಿಗೆ ತೂರಿ ಹೆಲ್ಮೆಟ್ ಇಲ್ಲದೆ ಸವಾರಿ ಮಾಡಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸಾರ್ವಜನಿಕರ ಪ್ರಶ್ನೆ ಮತ್ತು ನಿರೀಕ್ಷೆಗಳು:
ಎಲ್ಲರಿಗೂ ಒಂದೇ ಕಾನೂನೇ?: “ಸಾಮಾನ್ಯ ನಾಗರಿಕರು ಹೆಲ್ಮೆಟ್ ಧರಿಸದಿದ್ದರೆ ತಕ್ಷಣ ಸಿಸಿಟಿವಿ ಕ್ಯಾಮೆರಾ ಆಧಾರಿತ ಇ-ಚಲನ್ ಮೂಲಕ ದಂಡದ ನೋಟಿಸ್ ಮನೆಗೆ ತಲುಪುತ್ತದೆ. ಅದೇ ರೀತಿ ಜನಪ್ರತಿನಿಧಿಗೂ ಕಾನೂನು ಅನ್ವಯವಾಗುತ್ತದೆಯೇ?” ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಸಿಟಿಟಿವಿ ಸಾಕ್ಷಿ: ಹಾವೇರಿ ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆಗಳನ್ನು ತಡೆಯಲು ಸಿಸಿಟಿವಿ ಕ್ಯಾಮೆರಾಗಳ ಮೂಲಕ ವಾಹನಗಳ ನಿಗಾ ವಹಿಸಿ ನೋಟಿಸ್ ಕಳುಹಿಸುವ ವ್ಯವಸ್ಥೆ ಜಾರಿಯಲ್ಲಿದೆ. ಶಾಸಕರ ಬೈಕ್ ಸವಾರಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದರೆ ದಂಡ ವಿಧಿಸಲಾಗುವುದೇ ಎಂಬ ಕುತೂಹಲ ಮೂಡಿದೆ.
ಮಾದರಿಯಾಗಬೇಕಾದ ಶಾಸಕರು: ಕಾನೂನು ಪಾಲನೆಯಲ್ಲಿ ಜನಪ್ರತಿನಿಧಿಗಳು ಸಮಾಜಕ್ಕೆ ಮಾದರಿಯಾಗಬೇಕು. ಹುದ್ದೆ ಅಥವಾ ಸ್ಥಾನಮಾನ ನೋಡದೆ ನಿಯಮ ಉಲ್ಲಂಘಿಸಿದ ಪ್ರತಿಯೊಬ್ಬರಿಗೂ ಸಮಾನವಾಗಿ ದಂಡ ಅನ್ವಯಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಹಾವೇರಿ ಜಿಲ್ಲಾ ಪೊಲೀಸ್ ಹಾಗೂ ಸಂಚಾರ ಇಲಾಖೆಯು ನಿಯಮ ಉಲ್ಲಂಘನೆಗೆ ದಂಡದ ನೋಟಿಸ್ ಜಾರಿ ಮಾಡುತ್ತದೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.



