ಸಮಾಜ ಸೇವೆಯ ಮುಖವಾಡದಲ್ಲಿ ‘MDMA’ ಸಾಗಾಟ: ಆಂಬ್ಯುಲೆನ್ಸ್ ಚಾಲಕ ಜಲೀಲ್ ಬಾಬಾ ವಿರುದ್ಧ ಎಫ್ಐಆರ್, ಆರೋಪಿ ತಲೆಮರೆಸಿಕೊಳ್ಳುವಿಕೆ

ಬೆಳ್ತಂಗಡಿ: ಬಾಗಲಕೋಟೆಯಲ್ಲಿ ಇತ್ತೀಚೆಗೆ ಭೇದಿಸಲಾದ ₹5.50 ಕೋಟಿ ಮೌಲ್ಯದ ಭಾರಿ ಪ್ರಮಾಣದ MDMA ಮಾದಕ ವಸ್ತು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಮಾಜ ಸೇವೆಯ ನೆಪದಲ್ಲಿ ಆಂಬ್ಯುಲೆನ್ಸ್ ಬಳಸಿಕೊಂಡು ದಂಧೆ ನಡೆಸುತ್ತಿದ್ದ ಬೆಳ್ತಂಗಡಿಯ ಚಾಲಕ ಜಲೀಲ್ ಬಾಬಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಜಲೀಲ್ ಬಾಬಾ ಸದ್ಯ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.
ಈ ಬೃಹತ್ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಇಂದಬೆಟ್ಟು ಗ್ರಾಮದ ಮೊಹಮ್ಮದ್ ಅಲ್ತಾಫ್ (28), ಉಜಿರೆಯ ಹಳೆಪೇಟೆಯ ಮೊಹಮ್ಮದ್ ಮುಸ್ತಫಾ (28), ಇಂದಬೆಟ್ಟು ಗ್ರಾಮದ ಅಲ್ಫಾಜ್ ಹಾಗೂ ಅನ್ನಪ್ಪ ಸ್ವಾಮಿ ಅಲಿಯಾಸ್ ಮನು ಸೇರಿದಂತೆ ಈಗಾಗಲೇ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಂಗಳೂರಿನ ಕುಲಾಯಿಗುಡ್ಡೆ ನೀರಿನ ಟ್ಯಾಂಕ್ ಬಳಿಯ ಮನೆಯೊಂದರ ಮೇಲೆ ಮಂಗಳೂರು ನಗರ ಅಪರಾಧ ವಿಭಾಗದ (CCB) ಪೊಲೀಸರು ನಡೆಸಿದ ದಾಳಿಯಲ್ಲಿ, ಅನ್ನಪ್ಪ ಸ್ವಾಮಿ (ಮನು) ಎಂಬಾತನಿಂದ ₹1.50 ಲಕ್ಷ ಮೌಲ್ಯದ 15.17 ಗ್ರಾಂ MDMA ವಶಪಡಿಸಿಕೊಳ್ಳಲಾಗಿತ್ತು.
ಆತನನ್ನು ವಿಚಾರಣೆಗೊಳಪಡಿಸಿದಾಗ ದೆಹಲಿಯಿಂದ ಬೆಂಗಳೂರಿಗೆ ಹಾಗೂ ಅಲ್ಲಿಂದ ಕರಾವಳಿ ಭಾಗಕ್ಕೆ ನಿಷೇಧಿತ ಮಾದಕ ವಸ್ತುಗಳನ್ನು ಪೂರೈಸುವ ಬೃಹತ್ ಜಾಲದ ಮಾಹಿತಿ ಲಭ್ಯವಾಗಿತ್ತು.
ಈ ಸುಳಿವನ್ನಾಧರಿಸಿ CCB ಪೊಲೀಸರು ಜುಲೈ 15 ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ಸಮೀಪದ ‘ರಾಯಲ್ ಇನ್ ಲಾಡ್ಜ್’ ಮೇಲೆ ಮಿಂಚಿನ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದರು. ಈ ವೇಳೆ ₹5.50 ಕೋಟಿ ಮೌಲ್ಯದ 5.196 ಕೆಜಿ MDMA, ಕಾರು, ಬ್ಯಾಗ್ಗಳು ಹಾಗೂ ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಲಾಗಿತ್ತು.
ದೆಹಲಿಯಿಂದ ಕಾರಿನ ಮೂಲಕ ತರುತ್ತಿದ್ದ ಮಾದಕ ವಸ್ತುಗಳನ್ನು ಬೆಂಗಳೂರನ್ನು ಕೇಂದ್ರವಾಗಿಸಿಕೊಂಡು ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ವಿವಿಧ ಭಾಗಗಳಿಗೆ ವಿತರಿಸಲಾಗುತ್ತಿತ್ತು. ಯಾರಿಗೂ ಅನುಮಾನ ಬಾರದಂತೆ ಸರಬರಾಜು ಮಾಡಲು ಚಾಲಕ ಜಲೀಲ್ ಬಾಬಾ ತನ್ನ ಆಂಬ್ಯುಲೆನ್ಸ್ ವಾಹನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ವಿಷಯ ಬಂಧಿತರ ವಿಚಾರಣೆಯಿಂದ ಬಹಿರಂಗವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ CCB ಪೊಲೀಸರು ಮಂಗಳೂರಿನ ಪ್ರಧಾನ ಸೆಷನ್ಸ್ ನ್ಯಾಯಾಲಯಕ್ಕೆ ಸುದೀರ್ಘ ವರದಿ ಸಲ್ಲಿಸಿದ್ದು, ತಲೆಮರೆಸಿಕೊಂಡಿರುವ ಜಲೀಲ್ ಬಾಬಾ ಬಂಧನಕ್ಕಾಗಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.



