ಬೆಳಗಾವಿ: ಗಾಳಿ ಮಳೆಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ತಾಯಿ-ಮಗನಿಗೆ ಗಾಯ

ಬೆಳಗಾವಿ: ಜಿಲ್ಲೆಯಲ್ಲಿ ಬೀಸುತ್ತಿರುವ ರಭಸದ ಗಾಳಿ ಮತ್ತು ಮಳೆಗೆ ಅನಿಗೋಳ ಗ್ರಾಮದಲ್ಲಿ ಮನೆಯೊಂದರ ಮೇಲೆ ತೆಂಗಿನ ಮರ ಬಿದ್ದು, ತಾಯಿ ಮತ್ತು ಮಗ ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಬೈಲಹೊಂಗಲ ತಾಲೂಕಿನ ಅನಿಗೋಳ ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ. ಗ್ರಾಮದ ನಿವಾಸಿಗಳಾದ ನೀಲವ್ವ ಯಲ್ಲಯ್ಯನವರ (70) ಮತ್ತು ಅವರ ಮಗ ಉಳವಪ್ಪ ಯಲ್ಲಯ್ಯನವರ (37) ಗಾಯಗೊಂಡವರು. ಶುಕ್ರವಾರ ರಾತ್ರಿ ರಭಸವಾಗಿ ಬೀಸಿದ ಗಾಳಿ ಮಳೆಗೆ ಮನೆಯ ಪಕ್ಕದಲ್ಲಿದ್ದ ತೆಂಗಿನ ಮರವು ಏಕಾಏಕಿ ಮನೆಯ ಮೇಲೆ ಉರುಳಿ ಬಿದ್ದಿದೆ.
ಮರ ಬಿದ್ದ ರಭಸಕ್ಕೆ ಮನೆ ಸಂಪೂರ್ಣ ಹಾನಿಗೀಡಾಗಿದೆ. ಮರ ಬೀಳುವ ಸಮಯದಲ್ಲಿ ನೀಲವ್ವ ಅವರು ಮನೆಯ ಒಳಗೆ ಮಲಗಿದ್ದರು. ಮರ ಉರುಳಿದ ಪರಿಣಾಮ ತಾಯಿ ಮತ್ತು ಮಗನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಸಂಭವಿಸುತ್ತಿದ್ದಂತೆಯೇ ಸ್ಥಳೀಯರು ತಕ್ಷಣ ಸ್ಥಳಕ್ಕೆ ದೌಡಾಯಿಸಿ, ಮನೆಯ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆಯು ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಳೆಯ ಆರ್ಭಟಕ್ಕೆ ಬಡ ಕುಟುಂಬವೊಂದು ವಸತಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.



