ರಾಮಾಪುರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ: ರಸ್ತೆ ತಡೆದು ಗ್ರಾಮಸ್ಥರ ದಿಢೀರ್ ಆಕ್ರೋಶ; ಶಾಸಕರಿಗೆ ಮನವಿ

ಹನೂರು / ರಾಮಾಪುರ: ಹನೂರು ತಾಲೂಕಿನ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂದ್ರ ಕಾಲೋನಿ ಹಾಗೂ 1 ಮತ್ತು 2ನೇ ವಾರ್ಡ್ಗಳಲ್ಲಿ ಕಳೆದ ಮೂರು ತಿಂಗಳಿಂದ ಕುಡಿಯುವ ನೀರಿನ ಅಭಾವ ತೀವ್ರಗೊಂಡಿದ್ದು, ಆಕ್ರೋಶಗೊಂಡ ಗ್ರಾಮಸ್ಥರು ಹಾಗೂ ಮಹಿಳೆಯರು ರಸ್ತೆ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.
ಸತತ ಮನವಿಗಳಿಗೂ ಪಂಚಾಯಿತಿ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಬಿಂದಿಗೆಗಳೊಂದಿಗೆ ರಸ್ತೆಯಲ್ಲೇ ಕುಳಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಕೂಲಿ ಕೆಲಸ ಬಿಟ್ಟು ನೀರಿಗಾಗಿ ಕಾಯುವ ಸ್ಥಿತಿ:
ಇಂದ್ರ ಕಾಲೋನಿಯಲ್ಲಿ ಪರಿಶಿಷ್ಟ ಜನಾಂಗದ ಬಡ ಕುಟುಂಬಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ದಿನಗೂಲಿ ನಂಬಿ ಜೀವನ ನಡೆಸುತ್ತಿದ್ದಾರೆ. ಸುಮಾರು 1,000ಕ್ಕೂ ಹೆಚ್ಚು ಮನೆಗಳು ಹಾಗೂ 2,000ಕ್ಕೂ ಅಧಿಕ ಜನಸಂಖ್ಯೆ ಇರುವ ಈ ಭಾಗದಲ್ಲಿ ನೀರಿಗಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಲಿನಲ್ಲಿ ನಿಲ್ಲುವಾಗ ವಿದ್ಯುತ್ ವ್ಯತ್ಯಯ ಉಂಟಾಗಿ ಸಾರ್ವಜನಿಕರ ನಡುವೆ ಜಗಳಗಳೂ ನಡೆಯುತ್ತಿವೆ.
”ದಿನನಿತ್ಯ ಕೂಲಿ ಕೆಲಸಕ್ಕೆ ತೆರಳಿದರೆ ಮಾತ್ರ ಜೀವನ ಸಾಗಿಸಲು ಸಾಧ್ಯ. ಆದರೆ ಒಂದು ಬಿಂದಿಗೆ ನೀರಿಗಾಗಿ ಸಾಲಿನಲ್ಲಿ ನಿಂತರೆ ಕೆಲಸಕ್ಕೆ ಹೋಗುವುದಾದರೂ ಹೇಗೆ?” ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. 1ನೇ ವಾರ್ಡಿನಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ಖುದ್ದಾಗಿ ಮನವಿ ಮಾಡಿದರೂ ಪಂಚಾಯಿತಿ ಸಿಬ್ಬಂದಿ ನಿರ್ಲಕ್ಷ್ಯದ ಉತ್ತರ ನೀಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಉಗ್ರ ಪ್ರತಿಭಟನೆಯ ಎಚ್ಚರಿಕೆ:
ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ಹಾಗೂ ಹನೂರು ಕ್ಷೇತ್ರದ ಶಾಸಕ ಎಂ.ಆರ್. ಮಂಜುನಾಥ್ ಅವರು ತಕ್ಷಣ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು. ತಕ್ಷಣವೇ ಬೋರ್ವೆಲ್ ಲಾರಿ ಕಳುಹಿಸಿ ಕಾಮಗಾರಿ ಆರಂಭಿಸದಿದ್ದರೆ, ರಾಮಾಪುರದಿಂದ ಹನೂರು ಸಂಪರ್ಕಿಸುವ ಮುಖ್ಯ ರಸ್ತೆಯನ್ನು ಸಂಪೂರ್ಣವಾಗಿ ತಡೆದು ದಿನನಿತ್ಯ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಗ್ರಾಮಸ್ಥರ ಪ್ರಮುಖ ಬೇಡಿಕೆಗಳು:
ಇಂದ್ರ ಕಾಲೋನಿ ಹಾಗೂ 1 ಮತ್ತು 2ನೇ ವಾರ್ಡ್ಗಳಿಗೆ ತಕ್ಷಣವೇ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುವುದು.
ತೀವ್ರ ನೀರಸಮಸ್ಯೆ ಎದುರಿಸುತ್ತಿರುವ ಬಡಾವಣೆಗಳಲ್ಲಿ ತಕ್ಷಣ ಹೊಸ ಬೋರ್ವೆಲ್ ಕೊರೆಸಿ ಶಾಶ್ವತ ಪರಿಹಾರ ಒದಗಿಸುವುದು.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜಾಗೃತರಾಗಿ ರಾಮಾಪುರದ ನೀರಿನ ಅಭಾವವನ್ನು ತಣಿಸುತ್ತಾರೆಯೇ ಅಥವಾ ಉಗ್ರ ಪ್ರತಿಭಟನೆಗೆ ಅವಕಾಶ ಮಾಡಿಕೊಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ಶಾರುಕ್ ಖಾನ್, ಹನೂರು



