ಕಾರಟಗಿ: ಸರ್ಕಾರಿ ಜಾಗ ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತರಿಗೆ ನ್ಯಾಯ ಒದಗಿಸಲು ದಲಿತ ಸೇನೆ ಪಣ

ಕಾರಟಗಿ: “ಜನತಾ ಕಾಲೋನಿಯಲ್ಲಿ ಅರ್ಹರಿಗೆ ನಿವೇಶನ ಸೌಲಭ್ಯ ಸಿಗಬೇಕು. ಅಕ್ರಮವಾಗಿ ಸರ್ಕಾರಿ ಜಾಗ ಒತ್ತುವರಿ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ದಲಿತ ಸೇನೆಯ ನೂತನ ತಾಲೂಕಾಧ್ಯಕ್ಷ ಮೌಲಪ್ಪ ರಾಮತ್ನಾಳ್ ಭರವಸೆ ನೀಡಿದರು.
ಕಾರಟಗಿ ತಾಲೂಕು ದಲಿತ ಸೇನೆಯ ಅಧ್ಯಕ್ಷರಾಗಿ ಆಯ್ಕೆಯಾದ ಮೌಲಪ್ಪ ಅವರಿಗೆ ಬಸವಣ್ಣ ಕ್ಯಾಂಪ್ ಜನತಾ ಕಾಲೋನಿಯ ನಾಗರಿಕರು ಹಾಗೂ ಗೆಳೆಯರ ಬಳಗದಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದ ವೇಳೆ ಗ್ರಾಮದ ನಿವಾಸಿ ದ್ರಾಕ್ಷಾಯಣಿ ಎಂಬುವವರು ಮೌಲಪ್ಪ ಅವರಿಗೆ ಮನವಿ ಸಲ್ಲಿಸಿ, “ಹಲವು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಸ್ವಂತ ಸೂರಿಲ್ಲದೆ ಬದುಕು ಕಷ್ಟಕರವಾಗಿದೆ. ಬಸವಣ್ಣ ಕ್ಯಾಂಪ್‌ನ ಜನತಾ ಕಾಲೋನಿಯಲ್ಲಿ ಅರ್ಹರಿಗೆ ಸಿಗಬೇಕಾದ 30X40 ಅಳತೆಯ ನಿವೇಶನಗಳನ್ನು ಕೆಲವು ಪ್ರಭಾವಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಅಂತಹವರಿಂದ ಜಾಗ ಬಿಡಿಸಿ ನಮಗೆ ನ್ಯಾಯ ಒದಗಿಸಬೇಕು,” ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಮೌಲಪ್ಪ ಅವರು, “ಅಕ್ರಮವಾಗಿ ನಿವೇಶನ ಒತ್ತುವರಿ ಮಾಡಿ ಮನೆ ನಿರ್ಮಿಸಿದವರ ಬಗ್ಗೆ ತಹಸೀಲ್ದಾರ್ ಹಾಗೂ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ನಿವೇಶನ ರಹಿತ ಕುಟುಂಬಗಳಿಗೆ ನಿಯಮಾನುಸಾರ ಜಾಗ ಸಿಗುವವರೆಗೂ ದಲಿತ ಸೇನೆ ನಿರಂತರ ಹೋರಾಟ ಮಾಡಲಿದೆ,” ಎಂದರು.
ಇದೇ ಸಂದರ್ಭದಲ್ಲಿ ಪ್ರಾಧ್ಯಾಪಕ ಶರಣಪ್ಪ ಚಲುವಾದಿ ಮಾತನಾಡಿ, “ನಿರಂತರ ಜನಪರ ಕಾಳಜಿ ಹೊಂದಿರುವ ಮೌಲಪ್ಪ ಅವರು ತಾಲೂಕಾಧ್ಯಕ್ಷರಾಗಿರುವುದು ಹೆಮ್ಮೆಯ ಸಂಗತಿ,” ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ಶಿವರೆಡ್ಡಿ, ಮಲ್ಲಪ್ಪ ಪೂಜಾರಿ, ನಾಗಪ್ಪ ನಾಗನಕಲ್, ಶರಣಪ್ಪ ಮಾಸ್ತರ ಉಪಸ್ಥಿತರಿದ್ದರು. ದಲಿತ ಸೇನೆಯ ತಾಲೂಕು ಉಪಾಧ್ಯಕ್ಷ ರಾಘವೇಂದ್ರ ಕೊಡ್ಲಿ, ಪ್ರಮುಖರಾದ ತಿಮ್ಮಣ್ಣ, ಬಸವರಾಜ್ ನಾಯಕ್, ಸೋಮನಾಥ, ಮೋಹನರಾವ್ ಪಿ, ಮಹಮ್ಮದ್ ಸೇರಿದಂತೆ ಗ್ರಾಮದ ಯುವಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



