ಕಾರ್ಕಳ: ಜಾನುವಾರು ಕಳ್ಳತನ ಪ್ರಕರಣ; ನಾಲ್ವರು ಆರೋಪಿಗಳ ವಿರುದ್ಧ ‘ಕೋಕಾ’ ಕಾಯ್ದೆ ಅಡಿ ಕ್ರಮ

ಕಾರ್ಕಳ: ಜಾನುವಾರು ಕಳ್ಳತನ ಮತ್ತು ಸಂಘಟಿತ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಹೆಜ್ಜೆ ಇಟ್ಟಿದ್ದಾರೆ. ಈ ಹಿಂದೆ ಜಾನುವಾರು ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿಗಳ ವಿರುದ್ಧ ಈಗ ಕೋಕಾ (KCOCA – ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ಅಳವಡಿಸಿ ಮತ್ತೆ ಬಂಧಿಸಲಾಗಿದೆ.
ಬಂಧಿತರನ್ನು ಕಾರ್ಕಳ ನಲ್ಲೂರು ಗ್ರಾಮದ ಯೂನಿಸ್ (31), ಮೂಡಬಿದಿರೆ ಪುತ್ತಿಗೆ ಗ್ರಾಮದ ಇಕ್ಬಾಲ್ (29), ಕಲ್ಲಬೆಟ್ಟು ಗ್ರಾಮದ ನಾಸೀರ್ (28) ಮತ್ತು ಶೌಕತ್ ಅಲಿ (34) ಎಂದು ಗುರುತಿಸಲಾಗಿದೆ. ಈ ನಾಲ್ವರು ವ್ಯವಸ್ಥಿತವಾಗಿ ತಂಡ ಕಟ್ಟಿಕೊಂಡು ಜಾನುವಾರು ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
2025ರ ಸೆಪ್ಟೆಂಬರ್ 29ರಂದು ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಹಾಡಿಯಂಗಡಿ ಎಂಬಲ್ಲಿ ಜಯಶ್ರೀ ಪೂಜಾರಿ ಎಂಬುವವರ ಮನೆಯ ಹಟ್ಟಿಗೆ ಈ ತಂಡ ನುಗ್ಗಿತ್ತು. ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದಾಗ ಮನೆಯವರು ಎಚ್ಚರಗೊಂಡಿದ್ದರು. ಈ ವೇಳೆ ಆರೋಪಿಗಳು ಜಯಶ್ರೀ ಅವರಿಗೆ ತಲವಾರು ತೋರಿಸಿ ಜೀವ ಬೆದರಿಕೆ ಹಾಕಿದ್ದರು. ಹಟ್ಟಿಯಲ್ಲಿದ್ದ ಸುಮಾರು ₹35,000 ಮೌಲ್ಯದ ಮೂರು ಜಾನುವಾರುಗಳನ್ನು ಬಲವಂತವಾಗಿ ವಾಹನಕ್ಕೆ ತುಂಬಿಸಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಾಥಮಿಕ ತನಿಖೆಯ ನಂತರ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು. ಆದರೆ, ಹೆಚ್ಚಿನ ತನಿಖೆಯಲ್ಲಿ ಈ ತಂಡವು ಸಂಘಟಿತವಾಗಿ ಅಪರಾಧಗಳನ್ನು ಎಸಗುತ್ತಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಪೊಲೀಸರು ಇವರ ವಿರುದ್ಧ ಕೋಕಾ ಕಾಯ್ದೆಯನ್ನು ಅಳವಡಿಸಿದ್ದಾರೆ. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳ ಜಾಮೀನನ್ನು ರದ್ದುಪಡಿಸಿ ಮತ್ತೆ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಜಾನುವಾರು ಕಳ್ಳತನ ಮತ್ತು ಅಕ್ರಮ ಸಾಗಾಟ ತಡೆಯಲು ಪೊಲೀಸ್ ಇಲಾಖೆ ಇಂತಹ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.




