ಆ್ಯಸಿಡ್ ದಾಳಿ ಪ್ರಕರಣ; ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದ ನ್ಯಾಯಾಲಯ

ಕಡಬ: ಸುಮಾರು ಆರು ವರ್ಷಗಳ ಹಿಂದೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಮಂಗಳೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
2020ರಲ್ಲಿ ಕಡಬ ತಾಲೂಕಿನ ಕೊಯಿಲ ನಿವಾಸಿ ಜಯಾನಂದ ಕೆ. (60) ಎಂಬಾತನ ವಿರುದ್ಧ ಆ್ಯಸಿಡ್ ದಾಳಿ ನಡೆಸಿದ ಆರೋಪದಡಿ ಪ್ರಕರಣ ದಾಖಲಾಗಿತ್ತು. ಆಗಿನ ತನಿಖಾಧಿಕಾರಿ, ಪುತ್ತೂರು ಮಹಿಳಾ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಕುಸುಮಾಧರ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದ ಸುದೀರ್ಘ ತೀರ್ಪು:
ಪ್ರಕರಣದ ವಾದ-ಪ್ರತಿವಾದ ಆಲಿಸಿದ ಮಂಗಳೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪನಾಯ್ಕ ಅವರು ಆರೋಪಿಗೆ ಶಿಕ್ಷೆ ಪ್ರಕಟಿಸಿದ್ದಾರೆ.
ಐಪಿಸಿ ಸೆಕ್ಷನ್ 326ಎ: 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹3,00,000 ದಂಡ. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ 2 ವರ್ಷಗಳ ಸರಳ ಕಾರಾಗೃಹ ಶಿಕ್ಷೆ.
ಐಪಿಸಿ ಸೆಕ್ಷನ್ 504: 1 ವರ್ಷದ ಕಾರಾಗೃಹ ಶಿಕ್ಷೆ ಹಾಗೂ ₹5,000 ದಂಡ. ದಂಡ ಕಟ್ಟದಿದ್ದಲ್ಲಿ ಮತ್ತೆ 3 ತಿಂಗಳ ಸರಳ ಕಾರಾಗೃಹ ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಲಾಗಿದೆ.
ಸರ್ಕಾರದ ಪರವಾಗಿ ಅಭಿಯೋಜಕರಾದ ಕೃಷ್ಣವೇಣಿ, ಹರಿಶ್ಚಂದ್ರ ಉದ್ಯಾವರ, ಪ್ರಕಾಶ್‌ಚಂದ್ರ ಶೆಟ್ಟಿ ಹಾಗೂ ಜಯಂತಿ ಕೆ. ಅವರು ವಾದ ಮಂಡಿಸಿದ್ದರು.



