ದಾಂಡೇಲಿ: ಹೋಟೆಲ್‌ಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ; 5 ಗೃಹಬಳಕೆ ಸಿಲಿಂಡರ್ ಜಪ್ತಿ

ದಾಂಡೇಲಿ: ವಾಣಿಜ್ಯ ಉದ್ದೇಶಗಳಿಗಾಗಿ ನಿಯಮಬಾಹಿರವಾಗಿ ಗೃಹಬಳಕೆಯ (Domestic) ಗ್ಯಾಸ್ ಸಿಲಿಂಡರ್‌ಗಳನ್ನು ಬಳಸುತ್ತಿದ್ದ ನಗರದ ವಿವಿಧ ಹೋಟೆಲ್‌ಗಳ ಮೇಲೆ ಕಂದಾಯ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಗುರುವಾರ ಜಂಟಿ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯ ವೇಳೆ ಒಟ್ಟು 5 ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಹಶೀಲ್ದಾರ್ ಶೈಲೇಶ್ ಪರಮಾನಂದ್ ಹಾಗೂ ಆಹಾರ ನಿರೀಕ್ಷಕರ ನೇತೃತ್ವದ ತಂಡ ನಗರದ ಹೋಟೆಲ್‌ಗಳು, ಟೀ ಅಂಗಡಿ ಹಾಗೂ ಎಗ್ ರೈಸ್ ಸೆಂಟರ್‌ಗಳ ಮೇಲೆ ಪೂರ್ವಾಲೋಚನೆಯಿಲ್ಲದೆ ದಿಢೀರ್ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಬದಲಾಗಿ ಮನೆ ಬಳಕೆಯ ಸಿಲಿಂಡರ್‌ಗಳನ್ನು ಅಡುಗೆಗೆ ಬಳಸುತ್ತಿರುವುದು ಕಂಡುಬಂದಿದೆ. ನಿಯಮ ಉಲ್ಲಂಘಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ತಕ್ಷಣವೇ ಅವುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ದಾಳಿಯ ಬಳಿಕ ಮಾತನಾಡಿದ ತಹಶೀಲ್ದಾರ್ ಶೈಲೇಶ್ ಪರಮಾನಂದ್ ಅವರು, “ಗೃಹಬಳಕೆ ಸಿಲಿಂಡರ್‌ಗಳ ದುರುಪಯೋಗ ತಡೆಯಲು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ನಗರದಲ್ಲಿ ಇಂತಹ ತಪಾಸಣಾ ಕಾರ್ಯಚರಣೆಗಳು ಮುಂದಿನ ದಿನಗಳಲ್ಲೂ ನಿರಂತರವಾಗಿ ನಡೆಯಲಿವೆ” ಎಂದು ತಿಳಿಸಿದರು.
ಸಾಮಾನ್ಯ ಜನರಿಗೆ ತೊಂದರೆ ನೀಡಬೇಡಿ:
ಆಹಾರ ನಿರೀಕ್ಷಕ ಗೋಪಿ ಚೌಹಾನ್ ಮಾತನಾಡಿ, “ಪ್ರಸ್ತುತ ಮಾರುಕಟ್ಟೆಯಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಕೊರತೆ ಇರುವುದು ಕೇವಲ ತಾತ್ಕಾಲಿಕ. ಇದನ್ನು ನೆಪವಾಗಿಟ್ಟುಕೊಂಡು ಹೋಟೆಲ್ ಮಾಲೀಕರು ಸಾರ್ವಜನಿಕರಿಗೆ ಮೀಸಲಿರುವ ಗೃಹಬಳಕೆ ಸಿಲಿಂಡರ್‌ಗಳನ್ನು ಬಳಸಬಾರದು. ಇದರಿಂದ ಸಾಮಾನ್ಯ ಮನೆಗಳಿಗೆ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಎಚ್ಚರಿಸಿದರು.
ಈ ಕಾರ್ಯಾಚರಣೆಯಲ್ಲಿ ಆಹಾರ ನಿರೀಕ್ಷಕ ಗೋಪಿ ಚೌಹಾನ್, ದಯಾನಂದ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.



