ಶನಿವಾರಸಂತೆ: ಪೊಲೀಸ್ ಇಲಾಖೆಯಿಂದ ವಿಶೇಷ ಸಂಚಾರ ಜಾಗೃತಿ; ನಿಯಮ ಉಲ್ಲಂಘಿಸಿದ ಸವಾರರಿಗೆ ದಂಡದ ಬಿಸಿ

ಶನಿವಾರಸಂತೆ: ಸಾರ್ವಜನಿಕರ ಸುರಕ್ಷತೆ ಮತ್ತು ಅಪಘಾತಗಳ ತಡೆಗಟ್ಟುವ ನಿಟ್ಟಿನಲ್ಲಿ ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ವಿಶೇಷ ಸಂಚಾರ ಜಾಗೃತಿ ಹಾಗೂ ಜಾರಿ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಪ್ರಮುಖ ಕೇಂದ್ರವಾದ ಶನಿವಾರಸಂತೆ ಬಸ್ ನಿಲ್ದಾಣದ ಬಳಿ ಜಮಾಯಿಸಿದ ಪೊಲೀಸರು, ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಕುರಿತು ಮಹತ್ವದ ತಿಳುವಳಿಕೆ ನೀಡಿದರು.
ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಪೊಲೀಸ್ ಅಧಿಕಾರಿಗಳು, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಐಎಸ್ಐ (ISI) ಮುದ್ರೆ ಇರುವ ಗುಣಮಟ್ಟದ ಹೆಲ್ಮೆಟ್ ಧರಿಸಬೇಕು ಹಾಗೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು. ಸುರಕ್ಷಿತ ವಾಹನ ಚಾಲನೆಯಿಂದ ಮಾತ್ರ ಅಮೂಲ್ಯವಾದ ಜೀವಗಳನ್ನು ರಕ್ಷಿಸಲು ಸಾಧ್ಯ ಎಂದು ಸವಾರರಿಗೆ ಮನವರಿಕೆ ಮಾಡಿಕೊಡಲಾಯಿತು.
ಜಾಗೃತಿ ಮೂಡಿಸುವ ಜೊತೆಗೆ, ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿ ಅತಿವೇಗ, ಹೆಲ್ಮೆಟ್ ರಹಿತ ಚಾಲನೆ ಹಾಗೂ ತ್ರಿಬಲ್ ರೈಡಿಂಗ್ ಮಾಡುತ್ತಿದ್ದ ವಾಹನ ಸವಾರರನ್ನು ತಡೆದು ತಪಾಸಣೆ ನಡೆಸಲಾಯಿತು. ನಿಯಮ ಉಲ್ಲಂಘಿಸಿದ ಸವಾರರ ವಿರುದ್ಧ ಸ್ಥಳದಲ್ಲೇ ಪ್ರಕರಣಗಳನ್ನು ದಾಖಲಿಸಿ, ನಿಯಮಾನುಸಾರ ದಂಡ ವಸೂಲಿ ಮಾಡಲಾಯಿತು. ತಪ್ಪು ಮಾಡಿದ ವಾಹನ ಚಾಲಕರಿಗೆ ಮತ್ತೊಮ್ಮೆ ಇಂತಹ ತಪ್ಪು ಮಾಡದಂತೆ ಜವಾಬ್ದಾರಿಯುತ ಚಾಲನೆಯ ಕುರಿತು ಅರಿವು ಮೂಡಿಸಿ ಎಚ್ಚರಿಕೆ ನೀಡಲಾಯಿತು.
ಹೆಲ್ಮೆಟ್ ನಿಮ್ಮ ತಲೆಗೆ ಕವಚ ಮಾತ್ರವಲ್ಲ, ನಿಮ್ಮನ್ನು ನಂಬಿರುವ ನಿಮ್ಮ ಕುಟುಂಬಕ್ಕೆ ಅದುವೇ ದೊಡ್ಡ ಭರವಸೆ. ಚಾಲನೆಯಲ್ಲಿ ಒಂದು ಕ್ಷಣದ ನಿರ್ಲಕ್ಷ್ಯ ವಹಿಸಿದರೂ ಜೀವನವಿಡೀ ಪಶ್ಚಾತ್ತಾಪ ಪಡಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸಂಚಾರ ನಿಯಮ ಪಾಲಿಸಿ, ಸುರಕ್ಷಿತ ಜೀವನದ ಮೊದಲ ಹೆಜ್ಜೆಯನ್ನಿಡಿ.”
ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ ನಿರ್ದೇಶನದಂತೆ ನಡೆದ ಈ ಕಾರ್ಯಾಚರಣೆಯಲ್ಲಿ ಶನಿವಾರಸಂತೆ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.



