ವಿಶ್ವಾಸದ್ರೋಹ: ವಯೋವೃದ್ಧೆಯ ಆರೈಕೆ ನೆಪದಲ್ಲಿ ಚಿನ್ನದ ಸರ ಕದ್ದು ಪರಾರಿಯಾಗಿದ್ದ ಕೆಲಸದಾಕೆ ಪುಲಕೇಶಿನಗರ ಪೊಲೀಸರ ವಶಕ್ಕೆ

ಬೆಂಗಳೂರು: ವಯೋವೃದ್ಧೆಯ ಆರೈಕೆ ಮಾಡುವ ನೆಪದಲ್ಲಿ ನಂಬಿಸಿ, ಅವರು ನಿದ್ದೆ ಮಾಡುತ್ತಿದ್ದ ವೇಳೆ 17 ಗ್ರಾಂ ತೂಕದ ಚಿನ್ನದ ಸರ ಕದ್ದು ಪರಾರಿಯಾಗಿದ್ದ ಕೆಲಸದಾಕೆಯನ್ನು ಬಂಧಿಸುವಲ್ಲಿ ಪುಲಕೇಶಿನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿತೆಯನ್ನು ರಮಣಿ ಎಂದು ಗುರುತಿಸಲಾಗಿದ್ದು, ಈಕೆಯಿಂದ ಕಳವು ಮಾಡಲಾಗಿದ್ದ ಅಂದಾಜು 2 ಲಕ್ಷ ರೂಪಾಯಿ ಮೌಲ್ಯದ 17 ಗ್ರಾಂ ತೂಕದ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜುಲೈ 11 ರಂದು ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ವಯೋವೃದ್ಧೆಯೊಬ್ಬರ ದೈನಂದಿನ ಆರೈಕೆ ಹಾಗೂ ಕೆಲಸಕ್ಕಾಗಿ ರಮಣಿ ಎಂಬಾಕೆಯನ್ನು ನೇಮಿಸಿಕೊಳ್ಳಲಾಗಿತ್ತು. ಆದರೆ, ವೃದ್ಧೆಯ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡ ಆರೋಪಿತೆ, ವೃದ್ಧೆಯು ಗಾಢ ನಿದ್ದೆಯಲ್ಲಿದ್ದ ಸಮಯವನ್ನು ಸಂಚು ಹೂಡಿ ಬಳಸಿಕೊಂಡಿದ್ದಾಳೆ. ವೃದ್ಧೆ ಮಲಗಿದ್ದಾಗ ಅವರ ಕುತ್ತಿಗೆಯಲ್ಲಿದ್ದ 17 ಗ್ರಾಂ ಚಿನ್ನದ ಸರವನ್ನು ಕಳವು ಮಾಡಿ ಸ್ಥಳದಿಂದ ಕಾಲ್ಕಿತ್ತಿದ್ದಾಳೆ.
ವೃದ್ಧೆಯು ತಮಗಾದ ವಂಚನೆಯ ಕುರಿತು ಪುಲಕೇಶಿನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಧಿಕೃತ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತಕ್ಷಣವೇ ಕಾರ್ಯಪ್ರವೃತ್ತರಾಗಿ ತನಿಖೆ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿತೆ ರಮಣಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತಳಿಂದ ಕಳವು ಮಾಡಲಾಗಿದ್ದ ಸಂಪೂರ್ಣ ಒಡವೆಯನ್ನು ಜಪ್ತಿ ಮಾಡಲಾಗಿದ್ದು, ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಕಾನೂನು ರೀತ್ಯಾ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ. ವೃದ್ಧೆಯರ ಒಂಟಿತನ ಹಾಗೂ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಳ್ಳುವ ಇಂತಹ ಅಪರಿಚಿತ ಕೆಲಸಗಾರರನ್ನು ನೇಮಿಸಿಕೊಳ್ಳುವಾಗ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.



