ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚ: ಮೈಸೂರು ಪಾಲಿಕೆ ಕಂದಾಯ ನಿರೀಕ್ಷಕ ಮಂಜುನಾಥ್ ಅಮಾನತು!

ಮೈಸೂರು: ಇ-ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ ಗೂಗಲ್ ಪೇ (Google Pay) ಮೂಲಕ ₹50 ಸಾವಿರ ಲಂಚ ಪಡೆದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ-2ರ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ (RI) ಡಿ.ಎಂ. ಮಂಜುನಾಥ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಅವರು ಈ ಕುರಿತು ಅಧಿಕೃತ ಅಮಾನತು ಆದೇಶ ಹೊರಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಪಾಲಿಕೆಯ ವಾರ್ಡ್ ಸಂಖ್ಯೆ 62ರ ನಿವಾಸಿ ಪವಿತ್ರ ಎಂಬುವರು ತಮ್ಮ ಜಮೀನು/ಆಸ್ತಿಯ ಇ-ಖಾತೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಕಂದಾಯ ನಿರೀಕ್ಷಕ ಮಂಜುನಾಥ್ ಎರಡು ತಿಂಗಳು ಕಳೆದರೂ ಖಾತೆ ಮಾಡಿಕೊಡದೆ ಅಲೆದಾಡಿಸಿ ಸತಾಯಿಸುತ್ತಿದ್ದರು. ಈ ಕುರಿತು ಪವಿತ್ರ ಅವರ ಪರವಾಗಿ ವಕೀಲ ಲೋಕೇಶ್ ಅವರು ಖಾತೆ ಮಾಡಿಕೊಡುವಂತೆ ಮನವಿ ಮಾಡಿದಾಗ, ಆರೋಪಿ ಮಂಜುನಾಥ್ ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ.
ಗೂಗಲ್ ಪೇ ಮೂಲಕ ಲಂಚ ಸ್ವೀಕಾರ:
ವಕೀಲ ಲೋಕೇಶ್ ಅವರು ಮುಂಗಡವಾಗಿ ₹50,000 ಹಣವನ್ನು ಮಂಜುನಾಥ್ ಅವರ ಗೂಗಲ್ ಪೇ ಖಾತೆಗೆ ಡಿಜಿಟಲ್ ರೂಪದಲ್ಲಿ ಪಾವತಿಸಿದ್ದರು. ಆದರೂ ತೃಪ್ತನಾಗದ ಮಂಜುನಾಥ್, ಉಳಿದ ₹50,000 ಹಣ ನೀಡುವಂತೆ ಪಟ್ಟು ಹಿಡಿದು ಕಿರುಕುಳ ನೀಡಲು ಪ್ರಾರಂಭಿಸಿದ್ದ. ಇದರಿಂದ ಬೇಸತ್ತ ವಕೀಲ ಲೋಕೇಶ್, ಗೂಗಲ್ ಪೇ ವಹಿವಾಟಿನ ಸಾಕ್ಷಿ ಹಾಗೂ ಸೂಕ್ತ ದಾಖಲೆಗಳ ಸಮೇತ ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದರು.
ಆರೋಪ ಸಾಬೀತು, ಸಸ್ಪೆಂಡ್:
ದೂರಿನ ಅನ್ವಯ ತನಿಖೆ ನಡೆಸಿದಾಗ ಕಂದಾಯ ನಿರೀಕ್ಷಕ ಡಿ.ಎಂ. ಮಂಜುನಾಥ್ ಲಂಚ ಪಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಸರ್ಕಾರಿ ನೌಕರನಾಗಿ ಲಂಚ ಪಡೆದು ಕರ್ತವ್ಯ ಲೋಪ ಎಸಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತೆ ಎಂ.ಕೆ. ಸವಿತಾ, ಆರೋಪಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶಿಸಿದ್ದಾರೆ.



