ಮಳವಳ್ಳಿ: ಬಸ್ಸು ಹಾಗೂ ಟೆಂಪೋ ನಡುವೆ ಸರಣಿ ಅಪಘಾತ – 30ಕ್ಕೂ ಹೆಚ್ಚು ಗಾರ್ಮೆಂಟ್ಸ್ ಕಾರ್ಮಿಕರಿಗೆ ಗಾಯ

ಮಂಡ್ಯ: ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಎರಡು ಖಾಸಗಿ ಬಸ್ ಹಾಗೂ ಟೆಂಪೋ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಭೀಕರ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಸವನಪುರ ಗೇಟ್ ಬಳಿ ನಡೆದಿದೆ.
ಬಾಣಸಮುದ್ರ ಸಮೀಪದ ಗಾರ್ಮೆಂಟ್ಸ್ ಒಂದಕ್ಕೆ ಕೆಲಸಕ್ಕೆ ತೆರಳುತ್ತಿದ್ದ ಮಹಿಳಾ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನಗಳು ಈ ಅಪಘಾತಕ್ಕೆ ಈಡಾಗಿವೆ. ರಸ್ತೆಯಲ್ಲಿ ದಿಢೀರನೆ ಅಡ್ಡಬಂದ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ, ನಿಯಂತ್ರಣ ತಪ್ಪಿ ಮತ್ತೊಂದು ಖಾಸಗಿ ಬಸ್ ಹಾಗೂ ಟೆಂಪೋಗೆ ವಾಹನಗಳು ಸರಣಿಯಾಗಿ ಡಿಕ್ಕಿಯಾಗಿವೆ.
ಅಪಘಾತದ ತೀವ್ರತೆಗೆ ಬಸ್ ಹಾಗೂ ಟೆಂಪೋದಲ್ಲಿದ್ದ ಗಾರ್ಮೆಂಟ್ಸ್ ಮಹಿಳಾ ಸಿಬ್ಬಂದಿ ಸೇರಿದಂತೆ 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಪೈಕಿ ತೀವ್ರವಾಗಿ ಗಾಯಗೊಂಡಿರುವ 17 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



