ಪ್ರಾಣದ ಹದನ ಲೆಕ್ಕಿಸದೆ ನದಿಗೆ ಬಿದ್ದ ಯುವತಿಯನ್ನು ರಕ್ಷಿಸಿದ ಉದಯ ಕುಮಾರ್ ಶೆಟ್ಟಿ: ‘ಬಿರುವೆರ್ ಕುಡ್ಲ’ ಸಂಸ್ಥೆಯಿಂದ ಸನ್ಮಾನ

ಮಂಜೇಶ್ವರ (ಉಪ್ಪಳ): ಜೋರಾಗಿ ಸುರಿಯುತ್ತಿದ್ದ ಮಳೆಯ ನಡುವೆ ಉಕ್ಕಿ ಹರಿಯುತ್ತಿದ್ದ ನದಿಗೆ ಆಕಸ್ಮಿಕವಾಗಿ ಬಿದ್ದ ಯುವತಿಯನ್ನು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸುವ ಮೂಲಕ ಉದಯ ಕುಮಾರ್ ಶೆಟ್ಟಿ ದೇರಂಬಳ ಅವರು ಸಾಹಸ ಹಾಗೂ ಮಾನವೀಯತೆ ಮೆರೆದಿದ್ದಾರೆ.
ಬಿರುವೆರ್ ಕುಡ್ಲ ಮಂಜೇಶ್ವರ ತಾಲೂಕು ಘಟಕದ ಸದಸ್ಯರಾದ ಐತಪ್ಪ ಪೂಜಾರಿ ದೇರಂಬಳ ಅವರ ಪುತ್ರಿ, ಕಾಲೇಜು ವಿದ್ಯಾರ್ಥಿನಿ ಕುಮಾರಿ ಸುಶ್ಮಿತಾ ನಿನ್ನೆ ಸಂಜೆ ಜೋರು ಮಳೆಯಿದ್ದ ಕಾರಣ ತನ್ನ ತಂಗಿಯನ್ನು ಕರೆತರಲು ಹೋಗಿದ್ದರು. ಈ ವೇಳೆ ಉಪ್ಪಳದ ಜೋಡುಕಲ್ಲು ಪ್ರದೇಶದ ದೇರಂಬಳ ನದಿಗೆ ತಾತ್ಕಾಲಿಕವಾಗಿ ಅಡಿಕೆ ಮರದಿಂದ ನಿರ್ಮಿಸಲಾಗಿದ್ದ ಕಾಲುಸಂಕವನ್ನು ದಾಟುತ್ತಿದ್ದಾಗ ಕಾಲು ಜಾರಿ ನದಿಗೆ ಬಿದ್ದಿದ್ದರು.
ಸಾಹಸಮಯ ರಕ್ಷಣೆ: ಯುವತಿ ನದಿಗೆ ಬೀಳುತ್ತಲೇ ಆಕೆಯ ತಂಗಿ ನಿಶ್ಮಿತಾ ಜೋರಾಗಿ ಕೂಗಿಕೊಂಡಿದ್ದಾರೆ. ಸೀಮೆ ಬಳಿಯಲ್ಲಿದ್ದ ಉದಯ ಕುಮಾರ್ ಶೆಟ್ಟಿ ಅವರು ತಕ್ಷಣವೇ ಸ್ಪಂದಿಸಿ, ವೇಗವಾಗಿ ಹರಿಯುತ್ತಿದ್ದ ನದಿಗೆ ಧುಮುಕಿದ್ದಾರೆ. ಸುಮಾರು 200 ಮೀಟರ್‌ಗೂ ಹೆಚ್ಚು ದೂರ ನೀರಿನಲ್ಲಿ ತೇಲಿಹೋಗಿದ್ದ ಸುಶ್ಮಿತಾಳನ್ನು ಸುರಕ್ಷಿತವಾಗಿ ದಡಕ್ಕೆ ತಂದು ಜೀವ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾರ್ವಜನಿಕರ ಮೆಚ್ಚುಗೆ: ಉದಯ ಕುಮಾರ್ ಶೆಟ್ಟಿ ಅವರ ಈ ಸಮಯಪ್ರಜ್ಞೆ ಹಾಗೂ ಸಾಹಸಮಯ ಕಾರ್ಯಾಚರಣೆಗೆ ಸ್ಥಳೀಯರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಉದಯ ಕುಮಾರ್ ಶೆಟ್ಟಿ ಅವರ ಈ ಶ್ಲಾಘನೀಯ ಸಾಹಸವನ್ನು ಗುರುತಿಸಿ, ‘ಬಿರುವೆರ್ ಕುಡ್ಲ’ ಮಂಜೇಶ್ವರ ತಾಲೂಕು ಘಟಕದ ವತಿಯಿಂದ ಸುಶ್ಮಿತಾ ಅವರ ಮನೆಯಲ್ಲಿ ಅವರಿಗೆ ಶಾಲು ಹೊದಿಸಿ, ಗೌರವಧನ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಘಟಕದ ಗೌರವಾಧ್ಯಕ್ಷರಾದ ಶೀನಪ್ಪ ಪೂಜಾರಿ ಅಲಾರು, ಪ್ರಧಾನ ಕಾರ್ಯದರ್ಶಿ ಅನಿಲ್ ಪ್ರತಾಪನಗರ, ಸದಸ್ಯರಾದ ಆನಂದ ಬೀರಿಗುಡ್ಡೆ, ಹರಿಣಿ ಪ್ರತಾಪನಗರ ಹಾಗೂ ಜಯಂತಿ ಉದಯ ಕುಮಾರ್ ಪೈವಳಿಕೆ ಉಪಸ್ಥಿತರಿದ್ದರು.




