ಉಪಯುಕ್ತ ಮಾಹಿತಿಗಳುಕ್ರೈಂ ಸುದ್ದಿಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಆನೇಕಲ್: ಎಎಸ್‌ಬಿ ಕ್ರೀಡಾಂಗಣದಲ್ಲಿ ಅನುಮತಿಯಿಲ್ಲದೆ ಬೃಹತ್ ಮರಗಳ ಮಾರಣಹೋಮ; ಸಾರ್ವಜನಿಕರ ತೀವ್ರ ಆಕ್ರೋಶ

Share News

ಆನೇಕಲ್: ಪಟ್ಟಣದ ಪ್ರಮುಖ ಸಾರ್ವಜನಿಕ ಸ್ಥಳವಾದ ಎಎಸ್‌ಬಿ (ASB) ಆಟದ ಮೈದಾನದಲ್ಲಿ ಯಾವುದೇ ಅಧಿಕೃತ ಅನುಮತಿ ಪಡೆಯದೇ ಬೃಹತ್ ಗಾತ್ರದ ಮರಗಳನ್ನು ಧರೆಗುರುಳಿಸಿರುವ ಘಟನೆ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಸ್ಥಳೀಯರು ಹಾಗೂ ಯುವಜನತೆಯ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.

​ಈ ಕ್ರೀಡಾಂಗಣವು ಕೇವಲ ಆಟದ ಮೈದಾನವಾಗಿರದೆ, ಸ್ಥಳೀಯ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿದೆ. ಇಲ್ಲಿ ಹೋಬಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ವಿವಿಧ ಕ್ರೀಡಾಕೂಟಗಳು ಜರುಗುತ್ತವೆ. ಅಲ್ಲದೆ, ಪ್ರತಿದಿನ ನೂರಾರು ಹಿರಿಯ ನಾಗರಿಕರು ವಾಯುವಿಹಾರಕ್ಕೆ ಆಗಮಿಸುತ್ತಿದ್ದು, ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಹಬ್ಬಗಳಿಗೂ ಈ ಮೈದಾನವೇ ವೇದಿಕೆಯಾಗಿದೆ.

​ನೀರಿನ ಟ್ಯಾಂಕ್ ನಿರ್ಮಾಣ ನೆಪದಲ್ಲಿ ಪರಿಸರ ನಾಶ:

ಇದೀಗ ಇದೇ ಕ್ರೀಡಾಂಗಣದಲ್ಲಿ ಬೃಹತ್ ಗಾತ್ರದ ನೀರಿನ ಟ್ಯಾಂಕ್ ನಿರ್ಮಿಸುವ ನೆಪದಲ್ಲಿ ಜಾಗವನ್ನು ಆಕ್ರಮಿಸಿಕೊಳ್ಳಲಾಗುತ್ತಿದ್ದು, ದಶಕಗಳ ಹಳೆಯ ಬೃಹತ್ ಮರಗಳನ್ನು ಅರಣ್ಯ ಇಲಾಖೆಯ ಯಾವುದೇ ಮುನ್ಸೂಚನೆ ಅಥವಾ ಅನುಮತಿಯಿಲ್ಲದೆ ಕಡಿದುಹಾಕಲಾಗಿದೆ. ಇದು ಕ್ರೀಡಾಪಟುಗಳು ಹಾಗೂ ಪರಿಸರಾಸಕ್ತರ ಕಣ್ಣು ಕೆಂಪಗಾಗುವಂತೆ ಮಾಡಿದೆ. ಟ್ಯಾಂಕ್ ನಿರ್ಮಾಣದಿಂದ ಮೈದಾನದ ವಿಸ್ತೀರ್ಣ ಕಡಿಮೆಯಾಗಿ, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಕ್ರೀಡಾ ಭವಿಷ್ಯಕ್ಕೆ ಧಕ್ಕೆಯಾಗಲಿದೆ ಎಂದು ಸ್ಥಳೀಯರು ದೂರಿದ್ದಾರೆ.

​ಉಗ್ರ ಹೋರಾಟದ ಎಚ್ಚರಿಕೆ:

ಅರಣ್ಯ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಮರಗಳನ್ನು ಧರೆಗುರುಳಿಸಿರುವ ಸಂಬಂಧ ಇಲಾಖೆಯು ಕೂಡಲೇ ಮಧ್ಯಪ್ರವೇಶಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮೈದಾನದ ಅಸ್ತಿತ್ವ ಹಾಗೂ ಪರಿಸರ ನಾಶ ಖಂಡಿಸಿ ಆನೇಕಲ್‌ನ ಹಿರಿಯ ನಾಗರಿಕರು, ಯುವಜನತೆ ಮತ್ತು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಇಂದು ಸಂಜೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!